ಮಕ್ಕಳಲ್ಲಿ ದೇವರ ಕಂಡಿದ್ದ ಶಿವಕುಮಾರ ಶ್ರೀ: ಮಂಜುನಾಥ ಸ್ವಾಮೀಜಿ

| Published : Jan 24 2024, 02:04 AM IST

ಮಕ್ಕಳಲ್ಲಿ ದೇವರ ಕಂಡಿದ್ದ ಶಿವಕುಮಾರ ಶ್ರೀ: ಮಂಜುನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾದಿ ಪ್ರಥಮರ ಕಾಯಕ ಮತ್ತು ದಾಸೋಹ ಚಿಂತನೆ ಅಳವಡಿಸಿಕೊಂಡು ನಡೆದಾಡುವ ದೇವರೆಂದು ಹೆಗ್ಗಳಿಕೆ ಪಡೆದ ಶ್ರೇಯಸ್ಸು ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಬಸವಾದಿ ಪ್ರಥಮರ ಕಾಯಕ ಮತ್ತು ದಾಸೋಹ ಚಿಂತನೆ ಅಳವಡಿಸಿಕೊಂಡು ನಡೆದಾಡುವ ದೇವರೆಂದು ಹೆಗ್ಗಳಿಕೆ ಪಡೆದ ಶ್ರೇಯಸ್ಸು ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ ಎಂದು ಬದಾಮಿ ತಾಲೂಕಿನ ಕಿತ್ತಲಿ ಸಿದ್ಧರಾಮೇಶ್ವರ ಮಹಾಸಂಸ್ಥಾನಮಠದ ಅಧ್ಯಕ್ಷ ಮಂಜುನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದಲ್ಲಿ ಸಿದ್ಧಗಂಗಾ ಮಠದಲ್ಲಿ ಅಧ್ಯಯನ ಮಾಡಿರುವ ಹಳೆಯ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಶಿವಕುಮಾರ ಶ್ರೀಗಳ ೫ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತಾಯಿ ಹೃದಯಿಯಾಗಿದ್ದ ಶಿವಕುಮಾರ ಮಹಾಸ್ವಾಮಿಗಳು ಮಠದಲ್ಲಿ ಅಧ್ಯಯನ ಮಾಡುತ್ತಿದ್ದ ಮಕ್ಕಳಲ್ಲಿ ದೇವರನ್ನು ಕಂಡವರು. ಅವರಿಗಾಗಿ ಭಿಕ್ಷೆ ಬೇಡಿ ದವಸ ಧಾನ್ಯ ಸಂಗ್ರಹಿಸಿ ತ್ರಿವಿಧ ದಾಸೋಹವನ್ನು ಮುನ್ನಡೆಸಿದರು. ಮಠದಲ್ಲಿದ್ದ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯನ್ನಾಗಿಸಿದ ಪರಿಣಾಮ ಸರ್ಕಾರ ಅವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿದೆ. ೧೨ನೇ ಶತಮಾನದಲ್ಲಿದ್ದ ಶರಣರ ಚಿಂತನೆಗಳಿಂದ ೨೧ನೇ ಶತಮಾನವನ್ನು ಸುವರ್ಣ ಯುಗವನ್ನಾಗಿಸಿದ ಶಿವಕುಮಾರ ಶ್ರೀಗಳ ಆದರ್ಶಗಳನ್ನು ಮುಗಳಿ ಗ್ರಾಮದ ವಿದ್ಯಾರ್ಥಿಗಳು ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್‌ ಮಾತನಾಡಿ, ಚೈತನ್ಯ ಸ್ವರೂಪಿ ಶಿವಕುಮಾರ ಶ್ರೀಗಳು ಅನ್ನ, ಅಕ್ಷರ ಮತ್ತು ಆಶ್ರಯದ ತ್ರಿವಿಧ ದಾಸೋಹ ಮೂಲಕ ಸಿದ್ಧಗಂಗಾ ಮಠವನ್ನು ದೈವದ ತಾಣವನ್ನಾಗಿಸಿ ಪ್ರತಿಯೊಬ್ಬರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರ ವಿಚಾರಧಾರೆಗಳನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕೆಎಎಸ್ ಅಧಿಕಾರಿಗಳಾದ ಜೆ.ಶಂಕರ ಮತ್ತು ನಾಗರಾಜ ಸಿದ್ಧಗಂಗಾ ಮಠದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹನುಮಂತ ಕನಕೇರಿ, ಈಶ್ವರಗೌಡ ಪಾಟೀಲ ಮಾತನಾಡಿದರು.

ಇದಕ್ಕೂ ಮುನ್ನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿಕ್ಷಕರಾದ ಡಿ.ಎಂ. ಕೊಪ್ಪದ ಮತ್ತು ಬಿ.ಜಿ. ಕಂಕಣವಾಡ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪಂಚಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ಮತ್ತು ಗುರುಶಾಂತಪ್ಪ ಭದ್ರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಂಭುಲಿಂಗಪ್ಪ ರಾಮಗೇರಿ, ಶಿವಾನಂದ ರಾಮಗೇರಿ, ವಿ.ಜಿ. ದುಂಡಪ್ಪನವರ, ಧರ್ಮಣ್ಣ ಅರಳಿಕಟ್ಟಿ, ಎಸ್.ವಿ. ಕಟಗಿಹಳ್ಳಿಮಠ, ಎಚ್.ಎಫ್. ಅಕ್ಕಿ, ಶರಣಪ್ಪ ಕಂದಗಲ್ಲ, ಪಿಡಿಒ ಬಸವರಾಜ ಪೂಜಾರ, ಮುಖ್ಯ ಶಿಕ್ಷಕ ಈಶ್ವರ ಕಾಲವಾಡ, ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಸದಸ್ಯರು, ಗ್ರಾಪಂ ಸದಸ್ಯರು, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಶ್ರೀ ಮಲ್ಲಿಕಾರ್ಜುನ ಯುವಕ ಸಂಘ, ಶಲವಡಿಯ ರಾಣಿ ಚೆನ್ನಮ್ಮ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಂದ್ರು ಬಡಿಗೇರ ಮತ್ತು ಮಂಜುನಾಥ ಬಿಶೆಟ್ಟಿ ನಿರೂಪಿಸಿದರು. ಹನುಮಂತ ಬೆಂಗೇರಿ ಸ್ವಾಗತಿಸಿದರು. ಗುರುನಾಥ ಹುಬ್ಬಳ್ಳಿ ವಂದಿಸಿದರು.