ಬಿಸಿಲಿಂದ ಅಡಕೆ ಮರಗಳ ರಕ್ಷಿಸಲು ಸುಣ್ಣದ ಲೇಪನ

| Published : Jan 24 2024, 02:04 AM IST

ಸಾರಾಂಶ

ಅಡಕೆ ಮರಗಳ ರಕ್ಷಣೆಯಲ್ಲಿ ಸುಣ್ಣದ ಲೇಪನವೂ ಪ್ರಮುಖವಾಗಿದೆ. ಬೆಳೆಯುತ್ತಿರುವ ಸಸಿ, ಮರಗಳ ಕಾಂಡಕ್ಕೆ ಸೂರ್ಯನ ಬಿಸಿಲು ತಾಕಿ, ಆ ಭಾಗದಲ್ಲಿ ಸೂರ್ಯನ ಗಾಯ ಎಂಬುದು ಉಂಟಾಗುತ್ತದೆ. ಈ ಸಮಸ್ಯೆ ನಿಯಂತ್ರಿಸಲೆಂದೇ ಸುಣ್ಣದ ಲೇಪನ ಪದ್ಧತಿ ರೂಢಿಯಲ್ಲಿದೆ.

ಅರಹತೊಳಲು ಕೆ.ರಂಗನಾಥ್

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆ ಕೃಷಿ ದಿನೇದಿನೆ ಜಿಲ್ಲೆಯಲ್ಲಿ ವಿಸ್ತಾರಗೊಳ್ಳುತ್ತಿದೆ. ಹೊಲ-ಗದ್ದೆಗಳೆಲ್ಲ ತೋಟಗಳಾಗಿ ಪರಿವರ್ತನೆ ಆಗುತ್ತಿವೆ. ಮಳೆಗಾಲ ಕಳೆಯುತ್ತಿದ್ದಂತೆ ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ಈಗ ಅಡಕೆ ಮರಗಳನ್ನು ರಕ್ಷಿಸಿಕೊಳ್ಳುವುದು ಹೇಗೆಂಬ ಪರದಾಟದಲ್ಲಿ ರೈತರಿದ್ದಾರೆ.

ಅಡಕೆ ಬೆಳೆಯನ್ನು, ಮರಗಳನ್ನು ರಕ್ಷಿಸಿಕೊಳ್ಳಲು ರೈತರು ಹಲವಾರು ಪ್ರಯೋಗ, ಉಪಾಯಗಳನ್ನು ಕಂಡುಕೊಂಡಿರುತ್ತಾರೆ. ಅಂತೆಯೇ, ಕಾಲಕಾಲಕ್ಕೆ ಕೃಷಿ ಇಲಾಖೆಯಿಂದಲೂ ಸಲಹೆ ಪಡೆದು, ಬೆಳೆ ರಕ್ಷಿಸಿಕೊಳ್ಳುತ್ತಾರೆ. ಅಡಕೆ ಮರಗಳ ರಕ್ಷಣೆಯಲ್ಲಿ ಸುಣ್ಣದ ಲೇಪನವೂ ಪ್ರಮುಖವಾಗಿದೆ. ಬೆಳೆಯುತ್ತಿರುವ ಸಸಿ, ಮರಗಳ ಕಾಂಡಕ್ಕೆ ಸೂರ್ಯನ ಬಿಸಿಲು ತಾಕಿ, ಆ ಭಾಗದಲ್ಲಿ ಸೂರ್ಯನ ಗಾಯ ಎಂಬುದು ಉಂಟಾಗುತ್ತದೆ. ಈ ಸಮಸ್ಯೆ ನಿಯಂತ್ರಿಸಲೆಂದೇ ಸುಣ್ಣದ ಲೇಪನ ಪದ್ಧತಿ ರೂಢಿಯಲ್ಲಿದೆ.

ನೆರಳಿನ ಮರಗಳ ನಿರ್ಲಕ್ಷ್ಯ:

ಬಿರುಬಿಸಿಲು ತಾಕಿದ ಭಾಗ ಮೊದಲು ಹಳದಿಮಿಶ್ರಿತ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ದಿನ ಕಳೆದಂತೆ ಆ ಭಾಗದಲ್ಲಿ ಸಣ್ಣ ಬಿರುಕು ಮೂಡಿ, 2ರಿಂದ 3 ವರ್ಷ ಕಳೆಯುವುದರಲ್ಲಿ ಆ ಭಾಗ ನಿರ್ಜೀವವಾಗಿ, ಗಾಳಿಗೆ ಮರ ಮುರಿದುಬೀಳುವುದು. ಹಿಂದಿನ ಕಾಲದಲ್ಲಿ ರೈತರು ಬಿಸಿಲಿನಿಂದ ಅಡಕೆ ಮರಗಳನ್ನು ರಕ್ಷಿಸಲು ತೋಟದ ಸುತ್ತಲೂ ತೇಗ, ಬೀಟೆ, ಅರಬೇವು, ಆಲವಾಣ ಸೇರಿದಂತೆ ಹಲವಾರು ನೆರಳು ಕೊಡುವ ಮರಗಳನ್ನು ಬೆಳೆಸುತ್ತಿದ್ದರು. ಆದರೆ ಇಂದು ಆ ಕ್ರಮವನ್ನು ಅನುಸರಿದೇ ರೈತರು ತುಂಬಾ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇನ್ನೂ ಕೆಲವು ರೈತರು ಅಡಕೆ ಮರದ 5 ರಿಂದ 6 ಅಡಿಗಳ ಎತ್ತರಕ್ಕೆ ಸುಣ್ಣ ಬಳಿಯುವ ಮೂಲಕ ಅಡಕೆ ಮರಗಳ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಹೊಳೆಹೊನ್ನೂರು ವ್ಯಾಪ್ತಿಯ ತೋಟಗಳಲ್ಲೀಗ ಅಡಕೆ ಮರಗಳಿಗೆ ಸುಣ್ಣ ಬಳಿಯುವ ಕಾರ್ಯ ನಡೆಯುತ್ತಿರುವುದು ಅಲ್ಲಲ್ಲಿ ಕಾಣಸಿಗುತ್ತದೆ.

ಮೈದಾಹಿಟ್ಟು, ಬೆಲ್ಲ, ಉಪ್ಪು:

ಅಡಕೆ ಮರಗಳಿಗೆ ಹೀಗೆ ಸುಣ್ಣ ಬಳಿಯುವುದರಿಂದ ಬಿಸಿಲಿನ ತೀವ್ರತೆ ಮರದ ಕಾಂಡದ ಮೇಲೆ ಸುಮಾರು ಶೇ.30ರಷ್ಟು ಕಡಿಮೆ ಆಗುತ್ತದೆ. ಜೊತೆಗೆ ಮರದ ಕಾಂಡ ಮೃದುವಾಗುವುದು, ಸುಣ್ಣದ ನೀರಿನೊಂದಿಗೆ ಅದಕ್ಕೆ ತಕ್ಕಷ್ಟು ಮೈದಾ ಹಿಟ್ಟು, ಬೆಲ್ಲ ಮತ್ತು ಉಪ್ಪನ್ನು ಮಿಶ್ರಣ ಮಾಡಿ ಲೇಪಿಸುವುದರಿಂದ ಬಸವನ ಹುಳು, ರೋಗಕಾರಕ ಶಿಲೀಂಧ್ರಗಳು ದೂರವಾಗುತ್ತವೆ. ಮಳೆಗಾದಲ್ಲಿ ಮಳೆಯ ಹನಿ ಮರದ ಕಾಂಡದ ಮೇಲೆ ಬಿದ್ದಾಗ, ಮರಕ್ಕೆ ಬಳಿದ ಸುಣ್ಣವೆಲ್ಲಾ ಕರಗಿ ಬುಡಕ್ಕೆ ಬಿದ್ದರೂ ಅದು ಉತ್ತಮ ಪೋಶಕಾಂಶವಾಗುವುದು.

- - - ಕೋಟ್ ರೈತರು ಬೇಸಿಗೆ ಸಮಯದಲ್ಲಿ ಅಡಕೆ ಮರಗಳನ್ನು ಬಿಸಿಲಿನಿಂದ ರಕ್ಷಿಸಲು ಸುಣ್ಣ ಲೇಪಿಸುವುದು ವಾಡಿಕೆ. ಇದು ವೈಜ್ಞಾನಿಕವಾಗಿಯೂ ಅವಶ್ಯಕ. ಸುಣ್ಣ ಮರವನ್ನು ಬಿಸಿಲಿನಿಂದ ಕಾಪಾಡುವ ಜೊತೆಗೆ ಗೆದ್ದಲು ಮತ್ತು ಕ್ರಿಮಿ-ಕೀಟಗಳು ಮರಕ್ಕೆ ಹತ್ತದಂತೆ ತಡೆಯುತ್ತದೆ. ಅಲ್ಲದೇ, ಕೆಲವು ಶಿಲೀಂಧ್ರಗಳಿಂದ ಹರಡಬಹುದಾದ ರೋಗಗಳಿಂದ ಮರವನ್ನು ರಕ್ಷಿಸುತ್ತದೆ

- ರಾಮಕೃಷ್ಣ, ಹಿರಿಯ ಸಹಾಯಕ ನಿರ್ದೇಶಕ. ತೋಟಗಾರಿಕೆ ಇಲಾಖೆ, ಭದ್ರಾವತಿ

- - - ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಅಡಕೆ ಮರಗಳಿಗೆ ಸುಣ್ಣವನ್ನು ಲೇಪಿಸುತ್ತಿದ್ದೇವೆ. ಇದರಿಂದ ಯಾವುದೇ ಮರ ಹಾಳಾಗಿಲ್ಲ. ಎಲ್ಲ ಮರಗಳೂ ಆರೋಗ್ಯದಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಫಸಲು ನಿರೀಕ್ಷೆಯಲ್ಲಿದ್ದೇನೆ

- ಮಲ್ಲೇಶ್. ಕೃಷಿಕ, ಸೈದರಕಲ್ಲಹಳ್ಳಿ

- - - -21ಎಚ್‌ಎಚ್‌ಆರ್‌03:

ಹೊಳೆಹೊನ್ನೂರು ಸಮೀಪದ ಸೈದರ ಕಲ್ಲಹಳ್ಳಿಯ ಮಲ್ಲೇಶ್‌ ಅವರ ತೋಟದಲ್ಲಿ ಅಡಕೆ ಮರಗಳಿಗೆ ಸುಣ್ಣ ಬಳಿದಿರುವುದು.