ಧಾರವಾಡ:

ಶಿವರಾತ್ರಿಯ ದಿನ ಕಲಾವಿದ ವೀರಣ್ಣ ಪತ್ತಾರ ಎಂಬುವರ ಮನೆ ಅಟ್ಟದ ಮೇಲೆ ಭಜನೆಯೊಂದಿಗೆ ಶುರುವಾದ ಕಾರ್ಯಕ್ರಮವೊಂದು, 50 ವರ್ಷ ನಿರಂತರವಾಗಿ ಜರುಗುವ ಮೂಲಕ ಇದೀಗ ಶಿವಸ್ಫೂರ್ತಿ ಶಿವರಾತ್ರಿ ಅಹೋರಾತ್ರಿ ಸಂಗೀತೋತ್ಸವ ಎಂದು ದಾಖಲೆ ಬರೆದಿದೆ.

1976ರಲ್ಲಿ ಇಲ್ಲಿಯ ಮಂಗಳವಾರ ಪೇಟೆ ಮುದಿಮಾರುತಿ ಗಲ್ಲಿಯ ಮನೆಯ ಅಟ್ಟದ ಮೇಲೆ ಪಂ. ಶೇಷಗಿರಿ ದಂಡಾಪೂರ ಗುರುಗಳ ಸಮ್ಮುಖದಲ್ಲಿ ಗುರುರಾಜ ಭಜನಾ ಮಂಡಳಿ ಹೆಸರಿನ ಅಡಿ ಶುರುವಾದ ಶಿವರಾತ್ರಿ ಅಹೋರಾತ್ರಿ ಸಂಗೀತೋತ್ಸವ ಇದೀಗ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಪ್ರತಿ ವರ್ಷ ಶಿವರಾತ್ರಿ ದಿನ ಸಂಜೆ 6ಕ್ಕೆ ಶುರುವಾಗುವ ಕಛೇರಿಯು ಬಿಡುವಿಲ್ಲದೇ ಮರುದಿನ ಬೆಳಗ್ಗೆ 7ರ ವರೆಗೆ ಸಮಾಪ್ತಿಯಾಗುತ್ತದೆ.

ಈ ವರೆಗೆ ರಾಷ್ಟ್ರ-ಅಂತಾರಾಷ್ಟ್ರೀಯ ಖ್ಯಾತಿ ಸಂಗೀತಗಾರರು, ಮಹಿಳಾ ಮಂಡಳ, ಸಂಗೀತ ಪಾಠಶಾಲಾ ವಿದ್ಯಾರ್ಥಿಗಳು ಸಂಗೀತ ಪ್ರಸ್ತುತಪಡಿಸುವ ಮೂಲಕ ದೊಡ್ಡ ಸಂಗೀತ ಉತ್ಸವವಾಗಿ ಬೆಳೆದಿದೆ. ಬರೀ ಸಂಗೀತೋತ್ಸವ ಮಾತ್ರವಲ್ಲದೇ ಸಾಧಕ ಕಲಾವಿದರಿಗೆ ಶಿವನ ಹೆಸರಿನಲ್ಲಿ ಪ್ರಶಸ್ತಿ ಸಹ ನೀಡುವ ಸಂಸ್ಕೃತಿ ಬೆಳೆದು ಬಂದಿದೆ.

ಇದೀಗ ಮಹಾಶಿವರಾತ್ರಿ ಸುವರ್ಣ ಸಂಗೀತೋತ್ಸವ ಆಚರಣಾ ಸಮಿತಿ ರಚಿಸಿಕೊಂಡು ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಸಹಯೋಗದಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಯೋಜಕರಾದ ವೀರಣ್ಣ ಪತ್ತಾರ, ಶಶಿಧರ ನರೇಂದ್ರ, ಫೆ. 13 ಹಾಗೂ 14ರಂದು ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಹಾಗೂ ಫೆ. 15ರಂದು ಮಂಗಳವಾರ ಪೇಟ ಮುದಿಮಾರುತಿ ದೇವಸ್ಥಾನದಲ್ಲಿ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಮೂರು ದಿನದ ಕಾರ್ಯಕ್ರಮ:

ಫೆ. 13ರಂದು ಸಂಜೆ 5ಕ್ಕೆ ಆಲೂರು ವೆಂಕಟರಾವ ಭವನದಲ್ಲಿ ರುದ್ರೇಶ ಭಜಂತ್ರಿ ಹಾಗೂ ನಿಖಿಲ್‌ ಜೋಶಿ ಶಹನಾಯಿ ಮತ್ತು ಸಿತಾರ ಜುಗಲ್ ಬುಂದಿಗೆ ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ಸಾಥ್‌ ನೀಡುತ್ತಾರೆ. ಆರತಿ ಅಂಕಲಿಕರ ಗಾಯನಕ್ಕೆ ಪಂ. ರವೀಂದ್ರ ಯಾವಗಲ್‌ ಸಾಥ್‌ ನೀಡುವರು. ಶಿವಚಿತ್ರಗಾನದಲ್ಲಿ ರಾಧಾ ದೇಸಾಯಿ, ಸುಜಾತಾ ಗುರವ್‌, ಭಾರ್ಗವಿ ಕುಲಕರ್ಣಿ, ಡಾ. ವೀಣಾ ಸವದತ್ತಿ, ಡಾ. ಅರ್ಚನಾ ಸುತಾರ ಗಾಯನಕ್ಕೆ ಎಸ್‌.ಕೆ. ಪತ್ತಾರ, ಡಾ. ಪ್ರತಾಪ ಬಹುರೂಪಿ, ರವೀಂದ್ರ ಬಡಿಗೇರ, ಶಿವಕುಮಾರ ಕಂಕಣವಾಡಿ, ಶಿವರಾಜ ಕಮ್ಮಾರ ಚಿತ್ರ ಬಿಡಿಸಲಿದ್ದಾರೆ ಎಂದರು.

ಫೆ. 14ರಂದು ಸಂಜೆ 5ಕ್ಕೆ ಪದ್ಮಶ್ರೀ ಪುರಸ್ಕೃತ ಗಾಯಕ ಪಂ. ಎಂ. ವೆಂಕಟೇಶಕುಮಾರ, ನೌಶಾದ್‌ ಮತ್ತು ನಿಶಾದ್‌ ಹರ್ಲಾಪುರ ಗಾಯನ ಹಾಗೂ ಸುಮಾ ಹೆಗಡೆ, ಸುನೀಲಕುಮಾರ ಸಂತೂರ, ಬಾನ್ಸುರಿ ಜುಗಲ್‌ ಬುಂದಿ ನಡೆಯಲಿದೆ. ತಬಲಾದಲ್ಲಿ ವಿಜಯ ಸುತಾರ, ಡಾ. ಶ್ರೀಹರಿ ದಿಗ್ಗಾವಿ ಹಾಗೂ ಹಾರ್ಮೋನಿಯಂನಲ್ಲಿ ಬಸವರಾಜ ಹಿರೇಮಠ ಸಾಥ್‌ ನೀಡುವರು. ಫೆ. 15ರಂದು ಮುದಿಮಾರುತಿ ದೇವಸ್ಥಾನದಲ್ಲಿ ನಡೆಯಲಿರುವ ಅಹೋರಾತ್ರಿ ಸಂಗೀತೋತ್ಸವದಲ್ಲಿ ಆರಂಭದಲ್ಲಿ ಗುರುರಾಜ ಭಜನಾ ಮಂಡಳಿಯಿಂದ ಭಕ್ತಿ ಸಂಗೀತ, ಸ್ವರರಂಜನಿ ಸಂಗೀತ ವಿದ್ಯಾಲಯ, ಹೃಷಿಕೇಶ ಅರಬಟ್ಟಿ ಹಾಗೂ ಕಲಕೇರಿ ಸಂಗೀತ ವಿದ್ಯಾಲಯದಿಂದ ಶಿವಸ್ತುತಿ, ಸುಗಮ ಸಂಗೀತ ನಡೆಯಲಿದೆ. ತದನಂತರ ಸುಜಾತಾ ಗುರುವ, ಬಸವರಾಜ ವಂದಲಿ ಅವರಿಂದ ಗಾಯನ, ವಿಜಯ ಗೋನುಹಾಳ ಅವರಿಂದ ಸಿತಾರ ವಾದನವಿದೆ. ವಾದಿರಾಜ ದಂಡಾಪೂರ, ಪ್ರಸಾದ ಮಡಿವಾಳರ, ದಯಾನಂದ ಸುತಾರ ತಬಲಾ, ಪ್ರಮೋದ ಹೆಬ್ಬಳ್ಳಿ, ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್‌ ಇರಲಿದೆ ಎಂದು ತಿಳಿಸಿದರು.

ಸಂಗೀತಾ ಕಟ್ಟಿ, ಕಲ್ಕತ್ತಾದ ಪಂ. ಪಾರ್ಥೋಸಾರಥಿ, ಪುಣೆಯ ಅಥರ್ವ ವೈರಾಗಕರ, ವಿನಾಯಕ ಹೆಗಡೆ ಅವರ ಗಾಯನ, ಶ್ರೀಧರ ಮಾಂಡ್ರೆ, ಡಾ. ಉದಯ ಕುಲಕರ್ಣಿ, ಸುಧೀಂದ್ರಾಚಾರ್ಯ ತಾಳ ಸಾಥ್‌ ಇರಲಿದೆ. ಜತೆಗೆ ಇದೇ ವೇಳೆ ಸುವರ್ಣ ಸಾಧಕ ಶಿವ ಪ್ರಶಸ್ತಿ, ಸುವರ್ಣ ಕಲಾಪೋಷಕ ಸಾಧಕ ಶಿವ ಪ್ರಶಸ್ತಿ, ಸಾಧಕ ಶಿವ ಸಮ್ಮಾನ ಪ್ರಶಸ್ತಿ ಸಹ ಪ್ರದಾನ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌.ಕೆ. ಪತ್ತಾರ, ವೀಣಾ ಬಡಿಗೇರ, ರಾಜು ಕುಲಕರ್ಣಿ, ರವಿ ಎಲಿಗಾರ ಇದ್ದರು.