ಇಂದಿನಿಂದ ಆರ‍್ಯವೈಶ್ಯ ಮಂಡಳಿಯಿಂದ ಶ್ರೀ ವಾಸವಿ ಜಯಂತಿ ಮಹೋತ್ಸವ

| Published : May 04 2025, 01:31 AM IST

ಇಂದಿನಿಂದ ಆರ‍್ಯವೈಶ್ಯ ಮಂಡಳಿಯಿಂದ ಶ್ರೀ ವಾಸವಿ ಜಯಂತಿ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೇ. 4ರಂದು ಶ್ರೀ ವಾಸವಿ ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ತಿಪಟೂರು: ತಿಪಟೂರು ಆರ‍್ಯವೈಶ್ಯ ಮಂಡಳಿ ವತಿಯಿಂದ ಶ್ರೀ ವಾಸವಿ ಜಯಂತಿ ಮಹೋತ್ಸವವು ಮೇ. 4ರಿಂದ 7ರವರೆಗೆ ನಡೆಯಲಿದೆ ಎಂದು ಆರ‍್ಯವೈಶ್ಯ ಮಂಡಳಿ ತಾಲೂಕು ಅಧ್ಯಕ್ಷರಾದ ಬಾಗೇಪಲ್ಲಿ ನಟರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ. 4ರಂದು ಶ್ರೀ ವಾಸವಿ ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ. 5ರಂದು ಶ್ರೀ ವಾಸವಿ ಸುಪ್ರಭಾತ, ಧ್ವಜಾರೋಹಣ, ಗೋಪೂಜೆ, ಗಂಗೆ ತರುವ ಕಾರ್ಯಕ್ರಮ, ವಾಸವಿ ಸೇವಾ ಸಮಿತಿಯಿಂದ ಶ್ರೀ ಕನ್ಯಕಾ ಮಾತೆಗೆ ಕಾಯಿತುರಿ ಅಲಂಕಾರ, ಅರಿಶಿನ- ಕುಂಕುಮ ಅಭಿಷೇಕ, ನಗರೇಶ್ವರ ಪೂಜೆ. ಮೇ.6ರಂದು ನಗರ ಸಂಕೀರ್ತನೆ ಕಾರ್ಯಕ್ರಮ, ಕ್ಷೀರಾಭಿಷೇಕ, ಕುಬೇರ ಲಕ್ಷ್ಮೀಪೂಜೆ, ಕನ್ನಿಕೆಯರ ಪೂಜೆ, ಶ್ರೀ ಪೆನುಗೊಂಡಾಪುರ ವಾಸಿನಿಗೆ ಅನ್ನಪೂರ್ಣೇಶ್ವರಿ ಅಲಂಕಾರ, ಅಮ್ಮನವರ ಉತ್ಸವ ಮೂರ್ತಿಗೆ ಹಣ್ಣಿನ ರಸದ ಅಭಿಷೇಕ, ಮಹಾಮಂಗಳಾರತಿ ನಂತರ ಮಕ್ಕಳಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ.7ರಂದು ಶ್ರೀ ವಾಸವಿ ಜಯಂತಿ ನಡೆಯಲಿದ್ದು, ಶ್ರೀ ವಾಸವಿ ಸುಪ್ರಭಾತ, ದೇವಿ ಸ್ಮರಣೆ, ತಂಬಿಟ್ಟಿನ ಆರತಿ, ಅಮ್ಮನವರಿಗೆ ತುಲಾಭಾರ ಸೇವೆ, ವಾಸಿ ಹೋಮ ನಂತರ ಪೂರ್ಣಾಹುತಿ, ಶ್ರೀ ವಾಸವಿ ಮಾತೆಗೆ ವಜ್ರಾಂಗಿ ಅಲಂಕಾರ ನಂತರ ಸುವರ್ಣ ಪಾದುಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಸಂಜೆ ನಗರದ ರಾಜ ಬೀದಿಗಳಲ್ಲಿ ಶ್ರೀ ವಾಸವಿ ಮಾತೆಯ ವೈಭವದ ಉತ್ಸವ, ಶ್ರೀ ವಾಸವಿ ಜಾತ್ರೆಯು ನಡೆಯಲಿದ್ದು, ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಸಮಾಜದ ಬಂಧುಗಳು ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಬಾಗೇಪಲ್ಲಿ ನಟರಾಜು ಮನವಿ ಮಾಡಿದ್ದಾರೆ.