ಸಿದ್ದರಾಮಯ್ಯ ಅವರು ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ದೇವರಾಜ ಅರಸು ಅವರ ದಾಖಲೆ ಮುರಿದಿರಬಹುದು, ಆದರೆ ಅವರು ಎಂದಿಗೂ ದೇವರಾಜ ಅರಸು ಅವರ ಸ್ಥಾನ ತುಂಬಲು ಸಾಧ್ಯವಿಲ್ಲ.
ಕನ್ನಡಪ್ರಭ ವಾರ್ತೆ ಕಾರವಾರ
ಸಿದ್ದರಾಮಯ್ಯ ಅವರು ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ದೇವರಾಜ ಅರಸು ಅವರ ದಾಖಲೆ ಮುರಿದಿರಬಹುದು, ಆದರೆ ಅವರು ಎಂದಿಗೂ ದೇವರಾಜ ಅರಸು ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು,ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ಭೂ ಸುಧಾರಣೆ, ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ಮಲ ಹೊರುವ ಪದ್ಧತಿ ನಿಷೇಧದಂತಹ ಕ್ರಾಂತಿಕಾರಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಆದರೆ ಇಂದಿನ ಸರ್ಕಾರದಲ್ಲಿ ಬಡವರ ಮಕ್ಕಳಿಗೆ ಹಾಸ್ಟೆಲ್ ಸಿಗದೆ ಅವರು ಪಿಜಿಗಳನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ರಾಜ್ಯದ ಪ್ರಸ್ತುತ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ಪೂಜಾರಿ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರ ಹಂಚಿಕೆಯ ಜಗಳದಿಂದಾಗಿ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಸಕರ ಗನ್‌ಮ್ಯಾನ್‌ಗಳೇ ಗುಂಡು ಹಾರಿಸುವಂತ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಲ್ಲಿನ ಲೋಪಗಳನ್ನು ಸ್ವತಃ ಒಪ್ಪಿಕೊಂಡಿದೆ ಮತ್ತು ರಸ್ತೆ, ಸೇತುವೆಗಳ ದುರಸ್ತಿಗೆ ಹಣವಿಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿದ ಸಂಸದರು, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರವು ಕೆಲಸದ ದಿನಗಳನ್ನು 125ಕ್ಕೆ ಏರಿಸಿದೆ ಮತ್ತು ವೇತನ ಪಾವತಿಯಲ್ಲಿ ಪಾರದರ್ಶಕತೆ ತಂದಿದೆ. ಆದರೆ ಕೆಲವು ರಾಜ್ಯಗಳು ಈ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು 15ನೇ ಹಣಕಾಸು ಯೋಜನೆಯ ಹಣವನ್ನು ಸರಿಯಾಗಿ ಬಳಸುತ್ತಿಲ್ಲ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಜನರ ಹಾದಿ ತಪ್ಪಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
