ಸುಮಾರು ₹೮ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಭೂಮಿಪೂಜೆ, ಅಡಿಗಲ್ಲು ಸಮಾರಂಭ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಾ ಹವ್ಯಕ ಸಂಘ ಮತ್ತು ಹವ್ಯಕ ಭವನ ಕಟ್ಟಡ ಸಮಿತಿಯು ಜ.೧೫ರಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಮತ್ತು ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಅಮೃತಹಸ್ತದಲ್ಲಿ ಸುಮಾರು ₹೮ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಭೂಮಿಪೂಜೆ, ಅಡಿಗಲ್ಲು ಸಮಾರಂಭ ನೆರವೇರಲಿದೆ ಎಂದು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಮತ್ತು ಕಟ್ಟಡ ಸಮಿತಿ ಅಧ್ಯಕ್ಷ ಮಾರುತಿ ಘಟ್ಟಿ ಹೇಳಿದರು.ಕಾಳಮ್ಮನಗರದ ಭವನ ನಿರ್ಮಾಣವಾಗುವ ಸ್ಥಳದಲ್ಲೇ ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಕ್ರಮದ ಮಾಹಿತಿ ನೀಡಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಯತಿದ್ವಯರು ಅಂದು ೧೧ ಗಂಟೆಗೆ ಬಂದು ಈ ವಿಶೇಷ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಲಾನ್ಯಾಸ ನೆರವೇರಿಸಿದ ನಂತರ ನಡೆಯುವ ಧರ್ಮಸಭೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸುವರು. ಅಲ್ಲದೇ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ, ಹಿರಿಯ ವಿದ್ವಾಂಸರಾದ ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಳ್ಳಿ, ವಿ.ತಿಮ್ಮಣ್ಣ ಭಟ್ಟ ಬಾಲಿಗದ್ದೆ ಭಾಗವಹಿಸುವರು.ಅಂದು ಬೆಳಿಗ್ಗೆ ೭ ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಅಲ್ಲದೇ ಮಾತೆಯರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ರಾಮತಾರಕ ಮಂತ್ರ ಜಪಗಳು ನಡೆಯಲಿವೆ. ೧೧.೩೦ ಕ್ಕೆ ಗೋಮಾತೆಯ ಪೂಜೆ ನಡೆಯಲಿದೆ ಎಂದು ವಿವರಿಸಿದರು.
ಕಟ್ಟಡ ಸಮಿತಿಯ ಅಭಿಯಂತರರಾದ ಎಸ್.ವಿ. ಭಟ್ಟ ಹುಲಗಾನ, ಗಣೇಶ ಹೆಗಡೆ ಪಣತಗೇರಿ ಮಾತನಾಡಿದರು.ಈ ಸಂದರ್ಭ ವಿವಿಧ ಸಮಿತಿಗಳ ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಅನಂತ ಗಾಂವ್ಕರ, ಸಿ.ಎ. ವಿಘ್ನೇಶ್ವರ ಗಾಂವ್ಕರ, ವಿನಾಯಕ ಕವಾಳೆ, ನಾಗೇಂದ್ರ ಕವಾಳೆ, ರಾಘವೇಂದ್ರ ಭಟ್ಟ ಸುಣಜೋಗ, ಡಿ.ವಿ. ಹೆಗಡೆ ಚಿಕ್ಕೊತ್ತಿ, ನಾರಾಯಣ ಹೆಗಡೆ ಹುಟಕಮನೆ, ನಾರಾಯಣ ಭಟ್ಟ ಸುಣಜೋಗ, ವಿನಯ ಹೆಗಡೆ ಮತ್ತಿತರರಿದ್ದರು.