ದೇವರಾಜ ಅರಸು ಎತ್ತರಕ್ಕೆ ಸಿದ್ದರಾಮಯ್ಯ ಹೋಗಿರಬಹುದು. ಆದರೆ ಅರಸು ಅವರಂತಹ ಕೆಲಸ ಮಾಡಿಲ್ಲ. ಸಮಾಜದ ದೃಷ್ಟಿಕೋನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಕೆಳಗೆ ಹೋಗಿದ್ದಾರೆ. ಇದು ನನ್ನ ಅಭಿಪ್ರಾಯವಲ್ಲ, ಜನರ ಅಭಿಪ್ರಾಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ದೇವರಾಜ ಅರಸು ಎತ್ತರಕ್ಕೆ ಸಿದ್ದರಾಮಯ್ಯ ಹೋಗಿರಬಹುದು. ಆದರೆ ಅರಸು ಅವರಂತಹ ಕೆಲಸ ಮಾಡಿಲ್ಲ. ಸಮಾಜದ ದೃಷ್ಟಿಕೋನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಕೆಳಗೆ ಹೋಗಿದ್ದಾರೆ. ಇದು ನನ್ನ ಅಭಿಪ್ರಾಯವಲ್ಲ, ಜನರ ಅಭಿಪ್ರಾಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಿಎಂ ಡಿ.ದೇವಾರಾಜ ಅರಸು ದೀರ್ಘಾವಧಿ ಆಡಳಿತ ಸರಿಗಟ್ಟಲಿರುವ ಸಿಎಂ ಸಿದ್ದರಾಮಯ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ನನಗಿಂತ ಜೂನಿಯರ್. ಅವಕಾಶ ಸಿಕ್ಕ ಕಾರಣ ಸಿದ್ದರಾಮಯ್ಯ ಸಿಎಂ ಆದ. ಸಮಾಜಗಳ ಮಧ್ಯೆ ಕಲಹ ಉಂಟು ಮಾಡುವ ಕೆಲಸ ಅರಸು ಮಾಡಿಲ್ಲ. ಸಮಾಜಗಳ ಮಧ್ಯೆ ಕಲಹ ಉಂಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದ ಜನರು ಈ ಆರೋಪ ಮಾಡುತ್ತಿದ್ದಾರೆ. ದೇವರಾಜ ಅರಸುಗಿಂತ ಹೆಚ್ಚು ಕಾಲ ಸಿಎಂ ಆಗಿ ದಾಖಲೆ ಮಾಡಬಹುದು. ಆದರೆ ಅವರ ಎತ್ತರಕ್ಕೆ ಸಿದ್ದರಾಮಯ್ಯ ಸರಿಯಾಗಲು ಅಸಾಧ್ಯ. ಸಿದ್ದರಾಮಯ್ಯ ಸಾಧನೆಗೆ ಸೊನ್ನೆ ಅಂಕ ನೀಡುವೆ ಎಂದು ಹೇಳಿದರು.
ನರೇಗಾ ಯೋಜನೆ ಮರು ನಾಮಕರಣ ವಿರೋಧಿಸಿ ಕಾಂಗ್ರೆಸ್‌ನಿಂದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರಿಗೆ ಬೇರೆ ಕೆಲಸವಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕತ್ವವಿಲ್ಲ, ದಿಕ್ಕಿಲ್ಲ ದೆಸೆಯಿಲ್ಲ, ಸುಮ್ಮನೆ ನೆಪಹಿಡಿದು ಮಾತನಾಡುತ್ತಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕಕ್ಕೆ ಲಾಯಕ್ ಇದ್ದಾನಾ?. ಟೀ ಶರ್ಟ್ ಹಾಕಿಕೊಂಡು ಹೊಟ್ಟೆ ತೋರಿಸಿಕೊಂಡು ಪಾರ್ಲಿಮೆಂಟ್‌ನಲ್ಲಿ ಅಡ್ಡಾಡುತ್ತಾನೆ. ಸಂಬಂಧ ಇಲ್ಲದ್ದನ್ನು ಮಾಡುತ್ತೇನೆಂದು ರಾಹುಲ್ ಹೇಳುತ್ತಾನೆ. ಅದನ್ನು ಮಾಡಿಕೊಂಡು ಹೋಗಲು ಯಾರು ಸಹಕಾರ ಕೊಡುತ್ತಾರೆ?, ಎಷ್ಟು ಜನ ಸಹಕಾರ ಕೊಡುತ್ತಾರೆ ನೋಡೋಣ ಎಂದು ಸವಾಲೆಸೆದರು.ಬಜೆಟ್ ಬಳಿಕ ಸಿಎಂ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಅವರ ಪಕ್ಷಕ್ಕೆ ಬಿಟ್ಟಿದ್ದು. ನಾಳೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ದಲಿತ, ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ದಲಿತರ ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ ಮಾಡಿಕೊಂಡರು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಲೂಟಿ, ದರೋಡೆ ನಡೆಯುತ್ತಿದೆ. ಇದು ಕೆಟ್ಟ ಸರ್ಕಾರ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದರು.
