ಸಾರಾಂಶ
ಜಯಂತಿ ಕಾರ್ಯಕ್ರಮದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಜಗತ್ತಿಗೆ ಮೊಟ್ಟ ಮೊದಲು ಸಾಮೂಹಿಕ ವಿವಾಹಗಳನ್ನು ಪರಿಚಯಿಸಿದ ಕೀರ್ತಿ ಸಿದ್ದರಾಮೇಶ್ವರ ಅವರಿಗೆ ಸಲ್ಲುತ್ತದೆ ಎಂದು ಸಿದ್ದರಾಮೇಶ್ವರ ಮಹಾ ಸಂಸ್ಥಾನದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಚಿತ್ರದುರ್ಗ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ತಾಲೂಕು ಭೋವಿ ವಡ್ಡರ ಸಂಘದಿಂದ ಏರ್ಪಡಿಸಿದ್ದ ಸಿದ್ದರಾಮೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನಿಗಳು, ವಿಜ್ಞಾನಿಗಳು ಒಪ್ಪುವ ವೈಜ್ಞಾನಿಕತೆಯ ಧರ್ಮವನ್ನು ಸಿದ್ದರಾಮೇಶ್ವರರು ನೀಡಿದ್ದಾರೆ. ಮೂಢ ನಂಬಿಕೆ ಹಾಗೂ ಅನಿಷ್ಟ ಪಿಡುಗಗಳ ವಿರುದ್ಧ ಕ್ರಾಂತಿ ಸಾರಿ ಕಾಯಕವೇ ಮುಖ್ಯ ಎನ್ನುವ ನೀತಿಯನ್ನು ಸಾರಿದ್ದರು ಎಂದರು.ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಸಮಾಜಕ್ಕೆ ಅನುಕೂಲವಾದ ಕೆರೆಕಟ್ಟೆಗಳನ್ನು ನಿರ್ಮಿಸುವುದರ ಜೊತೆಯಲ್ಲಿ ಅನೇಕ ಸಮಾಜ ಸೇವಾ ಕಾರ್ಯದಲ್ಲಿ ಜಾತಿ ವ್ಯವಸ್ಥೆಯನ್ನು ಬದಿಗೊತ್ತಿ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಮುಂದಾದ ಸಿದ್ದರಾಮೇಶ್ವರರು ಅನ್ಯರಿಗೂ ಮಾದರಿಯಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿಯಲ್ಲಿ ನಾಯಕ, ಕುರುಬ, ಗೊಲ್ಲ ಹಾಗೂ ಭೋವಿ ಸಮುದಾಯದವರು ಹಿಂದಿನಿಂದಲೂ ಸಹೋದರಂತೆ ಬದುಕುತ್ತಿದ್ದೇವೆ. ಈ ಎಲ್ಲಾ ಸಮುದಾಯದವರ ಸಮಸ್ಯೆಗೂ ಬಹುತೇಕ ಒಂದೇ ವಿಧವಾಗಿದ್ದು, ಮಕ್ಕಳಿಗೆ ಖಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಪಕ್ಷಾತೀತವಾಗಿ ಒಂದಾಗಿ ಸಮುದಾಯದ ಶಕ್ತಿ ತೋರಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭೋವಿ ವಡ್ಡರ ಸಂಘದ ತಾಲೂಕು ಅಧ್ಯಕ್ಷ ಎಚ್.ನಾಗರಾಜ್, ಗೌರವಾಧ್ಯಕ್ಷ ಹನುಮಂತಪ್ಪ, ನಿವೃತ್ತ ಡಿಸಿಪಿ ವಿ.ತಿಮ್ಮಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಗೋವಿಂದರಾಜ್, ಹಾನಗಲ್ ಗ್ರಾಪಂ ಅಧ್ಯಕ್ಷೆ ಸ್ವಪ್ನ, ಪಪಂ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ಸದಸ್ಯೆ ಪದ್ಮಾವತಿ, ಪ್ರಾಚಾರ್ಯ ಡಾ.ತಿಮ್ಮಣ್ಣ ಮುಖಂಡರಾದ ಪಟೇಲ್ ಪಾಪನಾಯಕ, ಗೋವಿಂದಪ್ಪ, ಶ್ರೀನಿವಾಸ್, ಜಯಣ್ಣ, ಮರಿಸ್ವಾಮಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಗೋಪಾಲ್, ತಿಪ್ಪೇಸ್ವಾಮಿ, ವಿಮಲಾಕ್ಷಿ, ಅಂಜಿನಪ್ಪ, ಮಹೇಶ್, ರಾಮು ಇದ್ದರು.