ಕನ್ನಡ ಕಲಿಯಲು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಸರಳ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುಕನ್ನಡ ಕಲಿಯಲು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಸರಳ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು. ನಗರದ ಅಲಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಈ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು ಎಂದು ಕರೆ ನೀಡಿದರು. ಕನ್ನಡ ವರ್ಣಮಾಲೆ, ಕಾಗುಣಿತ, ಸರ್ವನಾಮ, ಕ್ರಯಾಪದಗಳು, ನಾಮಪದಗಳನ್ನು ಅರ್ಥ ಮಾಡಿಕೊಂಡಲ್ಲಿ ಅತ್ಯಂತ ಸುಲಭವಾಗಿ ಕನ್ನಡ ಕಲಿಯಬಹುದೆಂದು ಹಲವಾರು ಉದಾಹರಣೆಗಳ ಮೂಲಕ ತಿಳಿ ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರು ಹಾಗೂ ಕನ್ನಡ ಬಾರದೇ ಇರುವವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಮೂರು ತಿಂಗಳ ತರಗತಿಗಳನ್ನು ನಡೆಸಲಾಗುವುದು, ವಾರದಲ್ಲಿ ಮೂರು ಗಂಟೆಯ ತರಗತಿಗಳನ್ನು ಆಯೋಜಿಸಲಾಗುವುದು ಎಂದರು. ಇದುವರೆಗೂ ರಾಜ್ಯದಲ್ಲಿ 40 ಕ್ಕಿಂತ ಹೆಚ್ಚು ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮ ಮಾಡುತ್ತಿರುವ ಮೊದಲ ಸಂಸ್ಥೆ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗ ಮಾತನಾಡಿ, ಜಿಲ್ಲಾ ಕಸಾಪ ವತಿಯಿಂದ ಕಲಿಕಾ ಕೇಂದ್ರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸಲಿದೆ. ಕನ್ನಡ ಭಾಷೆಗೆ ಅನ್ಯ ಭಾಷಿಗರು ಸಹ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾರೆ. ಅಲ್ಪಸಂಖ್ಯಾತರು ಸಹ ಕನ್ನಡವನ್ನು ಹೆಚ್ಚಾಗಿ ಕಲಿಯಬೇಕು ಎಂದು ಹೇಳಿದರು. ಕನ್ನಡ ಕಲಿಕಾ ಕೇಂದ್ರದಲ್ಲಿ ಕನ್ನಡ ಕಲಿಸಲು ಸರ್ಕಾರದ ವತಿಯಿಂದ ನೇಮಕಗೊಂಡಿರುವ ಅಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೇಕ್ ಮೊಹಮ್ಮದ್ ಅನ್ವರ್ ಮಾತನಾಡಿ, ಇಂದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಹಾಗೂ ಐತಿಹಾಸಿಕ ದಿನ. ಕನ್ನಡ ಭಾಷೆಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ದಿಯ ಮಹತ್ವದ ಹೆಜ್ಜೆಯಾಗಿ ಕನ್ನಡ ಕಲಿಕಾ ಕೇಂದ್ರದ ಉದ್ಘಾಟನೆಗೊಂಡಿದೆ ಎಂದರು. ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ, ಹಾಜಿ ಮಿರ್ಜಾ ಅಸ್ಲಂ ಪಾಷ, ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ಮುಫ್ತಿತೌಹಿದ್ ಉರ್ ರೆಹಮಾನ್, ಶೇಕ್ ಮೊಹಮ್ಮದ್ ಅನ್ವರ್, ಶಾಹೀದ್ ಅಫ್ರಿದಿ, ಅಪ್ಸರ್‌ಖಾನ್, ಹಮೀದ್ ಬೇಗ್, ಹಾನಿ ಹುಸೇನ್, ಮಹಮ್ಮದ್ ಯೂಸುಫ್, ಇಕ್ಬಾಲ್ ಅಹಮದ್, ರ್ಫಾ ನ್, ಮುಸ್ಲಿಂ ಧರ್ಮಗುರುಗಳು, ಮದರಸಾದ ಅರೇಬಿಕ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.