ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳ ಸ್ಥಿತಿಯ ಪರಿಶೀಲನೆ ನಡೆಸಿ ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸೂಚಿಸಲಾಯಿತು. ಕ್ಯಾಮೆರಾಗಳು ಸರಾಗವಾಗಿ ಕಾರ್ಯನಿರ್ವಹಿಸಲು ಡಿವೈಸ್‌ಗಳ ತಾಂತ್ರಿಕ ಅಪ್‌ಡೇಟ್‌ಗಳನ್ನು ಆಗಾಗ ಮಾಡುತ್ತಿರಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-೨೭೫ರ ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಹಾಗೂ ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಲಹಾ ಸಮಿತಿ ತಂಡ ಶನಿವಾರ ಪರಿಶೀಲನೆ ನಡೆಸಿತು.

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಗಂಭೀರ ರಸ್ತೆ ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಹೆಚ್ಚಿನ ಕ್ರಮಗಳ ಬಗ್ಗೆ ಮಹತ್ವಪೂರ್ಣ ಚರ್ಚೆಗಳನ್ನು ನಡೆಸಲಾಯಿತು.

ಮೊದಲಿಗೆ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ-೨೭೫ರಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿರುವುದನ್ನು ಪರಿಶೀಲಿಸಿ, ಪ್ರಶಂಶಿಸಲಾಯಿತು. ನಂತರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷತಾ ಸುಧಾರಣೆ ಪಟ್ಟಿ ಮಾಡಲಾಯಿತು.

ಏನೇನು ಸುಧಾರಣಾ ಕ್ರಮಗಳು?

ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಎಐ ಕ್ಯಾಮೆರಾಗಳ ಸ್ಥಿತಿಯ ಪರಿಶೀಲನೆ ನಡೆಸಿ ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸೂಚಿಸಲಾಯಿತು. ಕ್ಯಾಮೆರಾಗಳು ಸರಾಗವಾಗಿ ಕಾರ್ಯನಿರ್ವಹಿಸಲು ಡಿವೈಸ್‌ಗಳ ತಾಂತ್ರಿಕ ಅಪ್‌ಡೇಟ್‌ಗಳನ್ನು ಆಗಾಗ ಮಾಡುತ್ತಿರಬೇಕು. ಈ ಸಂಬಂಧ ಕೆಳಕಂಡಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

ಹೆದ್ದಾರಿಯಲ್ಲಿ ವಾಹನದ ಹೆಚ್ಚಿನ ವೇಗವನ್ನು ನಿಯಂತ್ರಿಸಲು ಡಿಜಿಟಲ್ ವೇಗ ನಿಯಂತ್ರಣಗಳನ್ನು ಅಳವಡಿಸುವುದು. ವೇಗ ನಿಯಂತ್ರಣ ಮಾನಿಟರಿಂಗ್ ವ್ಯವಸ್ಥೆಯಲ್ಲಿನ ಕ್ರಮಗಳನ್ನು ಕಠಿಣಗೊಳಿಸುವುದು. ಹೆಚ್ಚು ಅಪಘಾತಗಳು ಸಂಭವಿಸುವ ಪ್ರದೇಶಗಳಲ್ಲಿ, ಚುಟುಕು ಮತ್ತು ಸ್ಪಷ್ಟ ಗಾತ್ರದ ಸೂಚನಾ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮಾಧ್ಯಮ ಟ್ರೈನಿಂಗ್ ಕಾರ್ಯಕ್ರಮ ನಡೆಸುವುದು. ಹೆಚ್ಚಿನ ವೇಗ ತಡೆಗಟ್ಟುವ ನಿಟ್ಟಿನಲ್ಲಿ ರೋಡ್ ಲೈನ್ ಡಿಸಪ್ಲೀನ್ ಕ್ರಮಗಳನ್ನು ಪಾಲಿಸುವಂತೆ ನಿರ್ದೇಶನ ನೀಡಿದರು.

ಇಂತಹ ಪ್ರಯತ್ನಗಳ ಮೂಲಕ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ದೇಶದ ಮುಖ್ಯ ರಸ್ತೆಗಳ ಸುರಕ್ಷತೆಯನ್ನು ಉತ್ತಮಗೊಳಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸ್ಥಳದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್,ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಆರಕ್ಷಕ ಅಧೀಕ್ಷಕ ತಿಮ್ಮಯ್ಯ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಂ.ಎಸ್.ಒಬಾಲೆ ಇತರೆ ಅಧಿಕಾರಿಗಳು ಹಾಜರಿದ್ದರು.