ಮುಂಡರಗಿ: ಜಿಲ್ಲೆಯ ಕಪ್ಪತ್ತಗುಡ್ಡದ ಉತ್ತರ ಭಾಗದಲ್ಲಿನ ತುಂಗಭದ್ರಾ ನದಿಯ ತೀರದ ನಂದಿಬೆಟ್ಟದ ಮೇಲೆ ಪ್ರಾಚೀನ ಕಾಲದಲ್ಲಿ ಸ್ಥಾಪಿತವಾಗಿರುವ ಮುಂಡರಗಿ ತಾಲೂಕಿನ ಸಿಂಗಟಾಲೂರಿನ ವೀರಭದ್ರೇಶ್ವರ ದೇವರು ಉತ್ತರ ಕರ್ನಾಟಕದಲ್ಲಿ ಮಹತ್ತರ ಸ್ಥಾನ ಪಡೆದಿದೆ. ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮಾ. 23ರಿಂದ 25ರ ವರೆಗೆ ಮೂರು ದಿನ ಅದ್ಧೂರಿಯಾಗಿ ಜರುಗಲಿದೆ.

ದೇವಸ್ಥಾನದ ಮುಂದೆ ಸದಾ ತುಂಗಭದ್ರೆ ಹರಿಯುತ್ತಿದ್ದರೆ, ಹಿಂದೆ ಹಸುರಿನಿಂದ ಕಂಗೊಳಿಸುವ ಕಪ್ಪತಗುಡ್ಡದ ಬೆಟ್ಟಗಳ ಸಾಲು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಉತ್ತರ ಕರ್ನಾಟಕದಲ್ಲಿಯೇ ಇದೊಂದು ಸುಂದರ ಪ್ರೇಕ್ಷಣೀಯ ಧಾರ್ಮಿಕ ಕ್ಷೇತ್ರವಾಗಿದ್ದು, ವರ್ಷದ 12 ತಿಂಗಳೂ ನಿರಂತರವಾಗಿ ಭಕ್ತರು ಇಲ್ಲಿಗೆ ಬಂದು ವೀರಭದ್ರೇಶ್ವರನ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ.

ವೀರಭದ್ರೇಶ್ವರ ಶಿಲಾ ಮೂರ್ತಿಯನ್ನು ಸಿಂಗಟಾಲೂರು ಕ್ಷೇತ್ರದ ಹತ್ತಿರ ಗುಡ್ಡದಲ್ಲಿಯೇ ಪ್ರತಿಷ್ಠಾಪಿಸಲು ತನ್ನದೇ ಆದ ಇತಿಹಾಸವಿದೆ. ಈ ಜಾಗಕ್ಕೆ ಪ್ರತಿದಿನ ಒಂದು ಆಕಳು ಬಂದು ಅಲ್ಲಿದ್ದ ಹುತ್ತದ ಮೇಲೆ ಹಾಲು ಕರೆಯುತ್ತಿತ್ತು. ಅದರ ಪಕ್ಕದ ಗವಿಯಲ್ಲಿ ತಪಸ್ಸು ಗೈಯುತ್ತಿದ್ದ ಸಂತರೊಬ್ಬರು ಈ ಸ್ಥಳದ ಮಹತ್ವ ಅರಿತು ಇಲ್ಲಿಯೇ ವೀರಭದ್ರೇಶ್ವರ ಮೂರ್ತಿ ಸ್ಥಾಪಿಸಿದರೆಂದು ಇತಿಹಾಸದಿಂದ ತಿಳಿದು ಬರುತ್ತಿದೆ. ಎಡಭಾಗದಲ್ಲಿ ಭದ್ರಕಾಳಮ್ಮನ ದೇವಾಲಯ, ಮಧ್ಯೆ ಗವಿ ಇದೆ.2018ರಲ್ಲಿ ನಾಡಿನ ಭಕ್ತರ ಸಹಕಾರದಿಂದ ಸುಮಾರು ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ಸಂಪೂರ್ಣವಾಗಿ ಕಲ್ಲಿನಿಂದ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಬರುವ ಭಕ್ತರಿಗೆ ಟ್ರಸ್ಟ್‌ ಕಮಿಟಿ ವತಿಯಿಂದ ವರ್ಷಪೂರ್ತಿ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಂಕ್ರಾಂತಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಸಾಗರವೇ ಹರಿದು ಬಂದು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಹೋಗುತ್ತಾರೆ.ಕಾರ್ತಿಕ ಮಾಸದಲ್ಲಿ ತಿಂಗಳ ಕಾಲ ವಿಶೇಷ ಪೂಜೆ, ದೀಪಾಲಂಕಾರ ನಡೆಯುತ್ತದೆ. ಪ್ರತಿ ಅಮಾವಾಸ್ಯೆಯಂದು ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ವಾಸ್ತವ್ಯ ಮಾಡುವುದಕ್ಕಾಗಿ ಯಾತ್ರಾ ನಿವಾಸ ಹಾಗೂ ದೇವಸ್ಥಾನದ ಸುಮಾರು 60 ವಸತಿ ಕೊಠಡಿಗಳಿವೆ.

ದೇವಸ್ಥಾನಕ್ಕೆ ಬರುವ ಶ್ರೀಗಳಿಗೆ ಪ್ರತ್ಯೇಕ ವಾಸ್ತವ್ಯ ಹಾಗೂ ಪೂಜಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಮೂರು ಎಸಿ ರೂಂಗಳನ್ನು ಸಹ ನಿರ್ಮಿಸಲಾಗಿದೆ. ಅಲ್ಲದೇ ಕುಡಿಯುವ ನೀರು ಹಾಗೂ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 2020ರಲ್ಲಿ ಭದ್ರಕಾಳಮ್ಮನ ದೇವಸ್ಥಾನ ನಂತರದಲ್ಲಿ ಈಶ್ವರ ದೇವಸ್ಥಾನಗಳನ್ನು ನೂತನವಾಗಿ ನಿರ್ಮಿಸಲಾಗಿದೆ.

ಕಳೆದೆರಡು ವರ್ಷದ ಹಿಂದೆ ನಾಗದೇವಸ್ಥಾನವನ್ನು ಬಳ್ಳಾರಿಯ ಡಾ. ಶಿದ್ದಲಿಂಗಪ್ಪ ಕರ್ಜಗಿ ನಿರ್ಮಾಣ ಮಾಡಿಸಿದ್ದಾರೆ. 2024ರ ಜನವರಿಯಲ್ಲಿ ಗೋಟಗೋಡಿ ಮಾದರಿಯಲ್ಲಿ ಸುಮಾರು ₹2 ಕೋಟಿಗೂ ಅಧಿಕ ವೆಚ್ಚದಲ್ಲಿ ವೀರಭದ್ರೇಶ್ವರ ಉದ್ಯಾನ ನಿರ್ಮಿಸಿದ್ದು, ವೀರಭದ್ರೇಶ್ವರ ಚರಿತ್ರೆಯ ಜತೆಗೆ ಗ್ರಾಮೀಣ ಸೊಗಡಿನ ಚಿತ್ರವನ್ನು ಕಾಣಬಹುದು.ಸುಮಾರು ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಲ್ಯಾಣಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಭಕ್ತರ ಸಹಾಯ, ಸಹಕಾರದಿಂದ ಕಾಮಗಾರಿ ಭರದಿಂದ ಸಾಗುತ್ತಿದೆ. ಕೊರ್ಲಹಳ್ಳಿ ಸೇತುವೆ ಬಳಿ ಸಿಂಗಟಾಲೂರು ವೀರಭದ್ರೇಶ್ವರ ದ್ವಾರ ಬಾಗಿಲನ್ನು ನಿರ್ಮಿಸಲು ಟ್ರಸ್ಟ್‌ ಕಮಿಟಿ ಯೋಚಿಸುತ್ತಿದೆ.


ಬಸ್ಸಿನ ವ್ಯವಸ್ಥೆ: ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಲು ಮುಂಡರಗಿ ಹಾಗೂ ಹೂವಿನ ಹಡಗಲಿಯಿಂದ ಬಸ್ಸಿನ ವ್ಯವಸ್ಥೆ ಇದೆ. ದೇವಸ್ಥಾನದ ಭಕ್ತರ ಹಾಗೂ ಟ್ರಸ್ಟ್‌ ಕಮಿಟಿ ಸರ್ವ ಸದಸ್ಯರ ಸಹಕಾರದಿಂದ ಹೆಚ್ಚಿನ ಕಾರ್ಯಗಳಾಗಿವೆ. ಇದೀಗ ಕಲ್ಯಾಣಮಂಟಪ ನಿರ್ಮಾಣ ಕೈಗೊಂಡಿದ್ದು, ಭಕ್ತರು ತನು, ಮನ, ಧನದಿಂದ ಸಹಕರಿಸುತ್ತಾರೆನ್ನುವ ನಂಬಿಕೆ ಇದೆ ಎಂದು ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ವಿ. ಹಂಚಿನಾಳ ತಿಳಿಸಿದರು.