ಹೊಸಪೇಟೆ: 2026-27ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ರಾಜ್ಯ ಸರ್ಕಾರ ಬಳಕೆ ಮಾಡಲು ಮುಂದಾಗಿದ್ದು, ಇದನ್ನು ವಿರೋಧಿಸಿ, ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ನಿವಾಸಕ್ಕೆ ತೆರಳಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಒತ್ತಾಯಿಸಿದರು.
ಶಾಸಕ ಗವಿಯಪ್ಪ ಪರವಾಗಿ ಸಿಬ್ಬಂದಿಗೆ ಮನವಿ ಸಲ್ಲಿಸಿದ ಕಟ್ಟಡ ಕಾರ್ಮಿಕರು, ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ರಾಜ್ಯ ಸರ್ಕಾರ ಇತರೆ ಯೋಜನೆಗಳಿಗೆ ಬಳಕೆ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ, ಕಾರ್ಮಿಕರ ಕಲ್ಯಾಣಕ್ಕಾಗಿ ಈ ನಿಧಿಯನ್ನು ಬಳಕೆ ಮಾಡಬೇಕು. ಇದಕ್ಕಾಗಿ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ ರಾಜ್ಯ ಖಜಾಂಚಿ ಎನ್. ಯಲ್ಲಾಲಿಂಗ ಮಾತನಾಡಿ, 2007 ರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ರಾಜ್ಯದಲ್ಲಿ ಫಲಾನುಭವಿಗಳಾಗಿ ನೋಂದಣಿಯಾಗಿರುವ ಸುಮಾರು 30 ಲಕ್ಷ ಕಾರ್ಮಿಕರು, ಮಕ್ಕಳು ಹಾಗೂ ಅವಲಂಬಿತರಿಗಾಗಿ ರೂ ಮಾಸಿಕ ₹3000 ಪಿಂಚಣಿ, ₹2 ಲಕ್ಷದವರಗೆ ವೈದ್ಯಕೀಯ ನೆರವು, ಸಹಜಸಾವು, ಅಪಘಾತ, ಕೆಲಸದ ಸ್ಥಳದಲ್ಲಿ ಸಾವು, ಪರಿಹಾರ ಧನ, ಹೆರಿಗೆ ಭತ್ಯೆ, ಶಿಶು ತಾಯಿ ಹಾರೈಕೆ, ಮದುವೆ ಧನ ಸಹಾಯ ಹಾಗೂ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಧನ ಸಹಾಯ ಕೌಶಲ್ಯತೆ ತರಬೆತಿ ಮೊದಲಾದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಭವಿಷ್ಯದಲ್ಲಿ ಸಾವಿರಾರು ಕೋಟಿ ಹಣದ ಅವಶ್ಯಕತೆ ಬೀಳುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ವಿವಿಧ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ನಿಧಿಯನ್ನು ರಾಜ್ಯ ಸರ್ಕಾರ ಬಳಕೆ ಮಾಡದಂತೆ ವಿಧಾನಸಭೆ ಕಲಾಪದಲ್ಲಿ ಒತ್ತಾಯಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಏಪ್ರಿಲ್ 20 ರಿಂದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಮುಖಂಡರಾದ ಆರ್.ಹೇಮಂತ್ ನಾಯಕ, ರಾಜೇಶ್, ಗಾಳೆಪ್ಪ, ಮುರಗನ್, ಬಸವರಾಜ ಸೇರಿದಂತೆ ಇತರರು ಇದ್ದರು.