ಹಾನಗಲ್ಲ: ಒಂಟಿ ಜೋಡಿಯೇ ಗ್ಯಾಂಗ್‌ ರೇಪ್‌ ಆರೋಪಿಗಳ ಟಾರ್ಗೆಟ್‌

| Published : Jan 14 2024, 01:32 AM IST

ಸಾರಾಂಶ

ಹಾನಗಲ್ಲಿನಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದು, ಮಹಿಳೆ ಮೇಲೆ ಗ್ಯಾಂಗ್‌ ರೇಪ್‌ ಎಸಗಿರುವ ಆರೋಪಿಗಳು ಇದೇ ರೀತಿಯ ಕುಕೃತ್ಯವನ್ನು ನಡೆಸುತ್ತ ಬಂದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.

ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್ಲಿನಲ್ಲಿ ನೈತಿಕ ಪೊಲೀಸ್‌ಗಿರಿ ಮೆರೆದು, ಮಹಿಳೆ ಮೇಲೆ ಗ್ಯಾಂಗ್‌ ರೇಪ್‌ ಎಸಗಿರುವ ಆರೋಪಿಗಳು ಇದೇ ರೀತಿಯ ಕುಕೃತ್ಯವನ್ನು ನಡೆಸುತ್ತ ಬಂದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಒಂಟಿ ಜೋಡಿಯನ್ನೇ ಟಾರ್ಗೆಟ್ ಮಾಡುತ್ತಿದ್ದ ಕುರಿತಾದ ವಿಡಿಯೋಗಳು ಇದಕ್ಕೆ ಪುಷ್ಟಿ ನೀಡುತ್ತಿವೆ.ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ ಬಳಿಯ ವಸತಿ ಗೃಹವೊಂದರಲ್ಲಿ ತಂಗಿದ್ದ ಮುಸ್ಲಿಂ ಮಹಿಳೆ, ಹಿಂದೂ ಪುರುಷನ ಮೇಲೆ ಹಲ್ಲೆ ನಡೆಸಿ, ಬಳಿಕ ಮಹಿಳೆಯನ್ನು ಕಾರಿನಲ್ಲಿ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಿನದಿಂದ ದಿನಕ್ಕೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ತನ್ನ ಮೇಲೆ ಏಳು ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿರುವುದು ಬೆಚ್ಚಿ ಬೀಳಿಸಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕಿಆಲೂರಿನ ಅಫ್ತಾಬ್‌ ಮಕ್ಬೂಲಅಹ್ಮದ್‌ ಚಂದನಕಟ್ಟಿ(24), ಮದರಸಾಬ್‌ ಮಹಮದ್‌ ಇಸಾಕ್‌ ಮಂಡಕ್ಕಿ ಅಕ್ಕಿಆಲೂರು (23), ಆಟೋ ಚಾಲಕ ಅಬ್ದುಲ್‌ಖಾದರ್‌ ಹಂಚಿನಮನಿ (28) ಹಾಗೂ ಸಮೀವುಲ್ಲಾ ಲಾಲನವರ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಮಹಮ್ಮದ್‌ ಸೈಫ್‌ ಅಬ್ದುಲ್‌ಸತ್ತಾರಸಾವಿಕೇರಿ ಅಕ್ಕಿಆಲೂರು ಎಂಬಾತ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿದ್ದಾನೆ. ಇನ್ನೂ ಕೆಲವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಒಂಟಿ ಜೋಡಿಯೇ ಟಾರ್ಗೆಟ್‌:

ಗ್ಯಾಂಪ್‌ ರೇಪ್‌ ಆರೋಪಿಗಳು ಈ ಹಿಂದೆ ಕೂಡ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ಯಾಂಗ್‌ ರೇಪ್‌ ಪ್ರಕರಣ ಹೊರಬೀಳುತ್ತಿದ್ದಂತೆ ಮುಸ್ಲಿಂ ಯುವತಿಯೊಬ್ಬಳನ್ನು ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿರುವ ಇದೇ ಆರೋಪಿಗಳು ಎನ್ನಲಾಗಿರುವ ವಿಡಿಯೋ ವೈರಲ್‌ ಆಗಿದೆ. ಮುಸ್ಲಿಂ ಕೋಮಿಗೆ ಸೇರಿದ ಯುವತಿ ಅನ್ಯ ಕೋಮಿನವರೊಂದಿಗೆ ಕಾಣಸಿಕೊಂಡರೆ ಅಂಥವರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ವೈರಲ್‌ ಆಗಿರುವ ವಿಡಿಯೋ ಪುಷ್ಠಿ ನೀಡುತ್ತಿದೆ.

ನಿರ್ಜನ ಪ್ರದೇಶದಲ್ಲಿ ಒಂಟಿ ಜೋಡಿ ಕಾಣಿಸಿಕೊಂಡರೆ ಅಲ್ಲಿಗೆ ಹೋಗಿ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದರಲ್ಲೂ ಮುಸ್ಲಿಂ ಯುವತಿಯರು ಅನ್ಯ ಕೋಮಿನವರೊಂದಿಗೆ ಕಾಣಸಿಕೊಂಡರೆ ಆರೇಳು ಜನರ ಗುಂಪು ನೈತಿಕ ಪೊಲೀಸ್‌ಗಿರಿ ಮಾಡುತ್ತಿತ್ತು. ಅಕ್ಕಿಆಲೂರಿನ ಗ್ಯಾಂಗ್‌ ರೇಪ್‌ ಆರೋಪಿಗಳ ಬಗ್ಗೆ ಹಲವರು ಇದೇ ಆರೋಪ ಮಾಡುತ್ತಿದ್ದಾರೆ. ಯುವತಿ ಮೇಲೆ ದೌರ್ಜನ್ಯ ಎಸಗುತ್ತಿರುವ ವಿಡಿಯೋ ಲಭ್ಯವಿದ್ದರೂ ಪೊಲೀಸರು ಸುಮೊಟೋ ಕೇಸ್‌ ದಾಖಲಿಸದೇ ಇರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಂಘಟನೆಗಳ ಬೆಂಬಲವಿತ್ತೇ?:

ಗ್ಯಾಂಗ್‌ ರೇಪ್‌ ಆರೋಪಿಗಳು ಅನೇಕ ಬಾರಿ ಈ ರೀತಿ ನೈತಿಕ ಪೊಲೀಸ್‌ಗಿರಿ ನಡೆಸಿ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪ ಕೇಳಿಬರುತ್ತಿದ್ದರೂ ಇದುವರೆಗೆ ಅವರ ಮೇಲೆ ಕೇಸ್‌ ದಾಖಲಾಗಿರಲಿಲ್ಲ. ಕೆಲವರು ಮರ್ಯಾದೆಗೆ ಅಂಜಿ ದೌರ್ಜನ್ಯ ಸಹಿಸಿಕೊಂಡು ಸುಮ್ಮನಿದ್ದರು ಎಂದು ಹಾನಗಲ್ಲ ಭಾಗದ ಜನರು ಹೇಳುತ್ತಿದ್ದಾರೆ. ಅಲ್ಲದೇ ಈ ಆರೋಪಿಗಳಿಗೆ ಕೆಲ ಸಂಘಟನೆಗಳ ಬೆಂಬಲವಿರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಕೆಲವು ಪ್ರಭಾವಿಗಳು ಈ ರೀತಿ ಕೃತ್ಯ ಎಸಗುವವರ ರಕ್ಷಣೆಗೆ ನಿಂತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ. ಕೇಸ್‌ ದಾಖಲಿಸದಂತೆ ಹಣದ ಆಮಿಷ:

ಗ್ಯಾಂಗ್‌ ರೇಪ್‌ ಪ್ರಕರಣವನ್ನು ಕೂಡ ಮೊದಲು ನೈತಿಕ ಪೊಲೀಸ್‌ಗಿರಿ ಎಂದೇ ಬಿಂಬಿಸುವ ಯತ್ನ ನಡೆದಿತ್ತು. ಆದರೆ, ಸಂತ್ರಸ್ತ ಮಹಿಳೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಮೇಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಅಲ್ಲದೇ ತನ್ನ ಮೇಲೆ 7 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯೇ ಹೇಳಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೂ ಮೊದಲು ಆಕೆಯ ಮೇಲೆ ಕೇಸ್‌ ದಾಖಲಿಸದಂತೆ ಒತ್ತಡ ಬಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ಸಂತ್ರಸ್ತೆಯೇ ಹೊರಹಾಕಿದ್ದಾಳೆ. ಅತ್ಯಾಚಾರ ಕೇಸ್‌ ದಾಖಲಿಸದಂತೆ ಅಕ್ಕಿಆಲೂರಿನ ಅನೇಕರು ಬಂದು ಒತ್ತಡ ಹೇರಿದರು. ಬೇಕಾದಷ್ಟು ಹಣ ಕೊಡುತ್ತೇವೆ ಎಂದರು. ಆದರೆ, ಮಾನ ಮರ್ಯಾದೆಯೇ ಹೋದ ಮೇಲೆ ಇವರು ಕೊಡುವ ಹಣ ಯಾರಿಗೆ ಬೇಕು? ನನಗೆ ಎರಡು ವರ್ಷದ ಮಗಳಿದ್ದಾಳೆ. ನನಗೆ ರಕ್ಷಣೆ ಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆ ಒತ್ತಾಯಿಸಿದ್ದಾಳೆ.

ಮಹತ್ವದ ಸಾಕ್ಷಿ ಲಭ್ಯ?:

ಹಾನಗಲ್ಲ ಪಟ್ಟಣದಿಂದ 8 ಕಿಲೋ ಮೀಟರ್ ದೂರದ ಶಿರಗೋಡ ಅರಣ್ಯ ಪ್ರದೇಶದಲ್ಲಿ ಗ್ಯಾಂಗ್‌ ರೇಪ್‌ ಎಸಗಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ಘಟನಾ ಸ್ಥಳದಲ್ಲಿ ಮಹಿಳೆಯ ಒಳ ಉಡುಪು ಪತ್ತೆಯಾಗಿದೆ ಎನ್ನಲಾಗಿದೆ. ದಾವಣಗೆರೆಯ ಎಫ್‌ಎಸ್‌ಎಲ್‌ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಐಜಿಪಿ ಭೇಟಿ, ತನಿಖೆ ಚುರುಕು:

ಜ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಶನಿವಾರ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್‌ ಹಾನಗಲ್ಲ ಠಾಣೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.