ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ: ನಿಯಮ ಪಾಲನೆಗೆ ಆಗ್ರಹ

| Published : Jan 21 2024, 01:32 AM IST

ಸಾರಾಂಶ

ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಅನ್ವಯ ನಾನಫಲಕಗಳಲ್ಲಿ ಕನ್ನಡ ಭಾಷೆ ಶೇಕಡ ೬೦ ರಷ್ಟಿರಬೇಕೆಂಬ ನಿಯಮ ಪಾಲನೆಗೆ ನಗರದ ಎಲ್ಲ ವಾಣಿಜ್ಯ ಮಳಿಗೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಆಗ್ರಹಿಸಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ । ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಒತ್ತಾಯಕನ್ನಡಪ್ರಭ ವಾರ್ತೆ ಹಾಸನ

ಕನ್ನಡ ಅಗ್ರಸ್ಥಾನದಲ್ಲಿದ್ದು, ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಅನ್ವಯ ನಾನಫಲಕಗಳಲ್ಲಿ ಕನ್ನಡ ಭಾಷೆ ಶೇಕಡ ೬೦ ರಷ್ಟಿರಬೇಕೆಂಬ ನಿಯಮ ಪಾಲನೆಗೆ ನಗರದ ಎಲ್ಲ ವಾಣಿಜ್ಯ ಮಳಿಗೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳು ಇದ್ದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಐತಿಹಾಸಿಕ ಪ್ರತಿಭಟನೆ ನಡೆಸಲಾಯಿತು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದ ಪರಿಣಾಮವಾಗಿ ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನಕ್ಕೆ ತೀರ್ಮಾನ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಿರುತ್ತದೆ. ಆದರೂ ಹಾಸನ ನಗರದಲ್ಲಿ ಹಲವಾರು ಕಡೆ ಸರ್ಕಾರದ ನಿಯಮದಂತೆ ನಾಮಫಲಕಗಳು ಇರುವುದಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಫೆಬ್ರವರಿ ೨೮ ರೊಳಗೆ ನಾಮಫಲಕ ಬದಲಿಸಲು ಆದೇಶಿಸಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಂಡು, ಎಲ್ಲ ನಾಮಫಲಕಗಳನ್ನು ಕನ್ನಡೀಕರಣಗೊಳಿಸಲು ನೋಟಿಸ್ ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ಸರ್ಕಾರದ ಸುಗ್ರೀವಾಜ್ಞೆ ಪಾಲನೆಯಾಗದಿದ್ದಲ್ಲಿ ಕನ್ನಡ ವಿರೋಧಿ ಮನಸ್ಥಿತಿಯ ವ್ಯಾಪಾರಸ್ಥರ ವಿರುದ್ಧ ಮಾತ್ರವಲ್ಲದೆ ನಗರಸಭೆ ವಿರುದ್ಧವೂ ತೀವ್ರ ಸ್ವರೂಪದ ಚಳವಳಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಳ್ಳಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದೆ ತಾವು ಈ ಕೂಡಲೇ ಕ್ರಮ ಜರುಗಿಸುತ್ತೀರೆಂದು ಭಾವಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇತ್ತೀಚಿಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದ ಘಟನೆಯಲ್ಲಿ ಅಧಿಕೃತವಾಗಿ ಟೆಂಡರ್ ಆಗಿರುವುದಿಲ್ಲ. ಅನಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿರುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಹೋದರೆ ಪಾರ್ಕಿಂಗ್ ರಶೀದಿ ಕೊಡಿ, ಯಾವ ಟೆಂಡರ್ ಆಗಿದೆ ಎಂದು ಕೇಳುವ ಮೂಲಕ ಯಾವ ರಶೀದಿ ಕೊಡದೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೆ, ಸಾರಿಗೆ ಇಲಾಖೆ ಡಿಸಿಗೆ ದೂರು ಹೇಳಿದ ವೇಳೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಇದುವರೆಗೂ ಕಳೆದ ಎರಡು ತಿಂಗಳಿಂದ ಪಾರ್ಕಿಂಗ್ ವಸೂಲಿ ನಡೆಯುತ್ತಿದ್ದು, ಆದರೆ ಕಂಪ್ಯೂಟರ್ ಬಿಲ್ ಮತ್ತು ಯಾವ ರಶೀದಿ ಕೊಡಲಾಗುತ್ತಿಲ್ಲ. ಅನಧಿಕೃತವಾಗಿ ದುಡ್ಡು ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದರು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಸೀತಾರಾಮು, ಯುವ ಘಟಕದ ಅಧ್ಯಕ್ಷ ಪ್ರೀತಂ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ, ಕಾರ್ಯದರ್ಶಿ ಅಬ್ದೂಲ್ ಖಾದರ್ ಇದ್ದರು.ಹಾಸನದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾತನಾಡಿದರು.