ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ

| Published : Jan 21 2024, 01:32 AM IST

ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ವಿವೇಕ ಯೋಜನೆಯಡಿ ನಿರ್ಮಾಣವಾದ ನೂತನ ಶಾಲಾ ಕೊಠಡಿ ಉದ್ಘಾಟಿಸಿದ ಶಾಸಕ ಯು.ಬಿ. ಬಣಕಾರ

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದ ಸಮಯ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ನಡೆದ 2022-23ನೇ ಸಾಲಿನ ವಿವೇಕ ಯೋಜನೆಯಡಿ ನಿರ್ಮಾಣವಾದ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಹಾವಳಿಯ ಮಧ್ಯೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ತಾಲೂಕಿನಲ್ಲಿ ಈಗಾಗಲೇ 45 ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಪಟ್ಟಣದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೈಟೆಕ್ ಶೌಚಾಲಯಕ್ಕೆ ಮನವಿ ಸಲ್ಲಿಸಿದ್ದು, ಶಿಕ್ಷಣ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯಿಂದ ಅನುದಾನ ಪಡೆದು ಒಂದು ತಿಂಗಳಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ಕಲಿಕೆಗೆ ಅನಕೂಲವಾಗಲೆಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ನಿಧಿಯಿಂದ ₹2 ಕೋಟಿ ಅನುದಾನದಲ್ಲಿ 5 ಸಾವಿರ ಡೆಸ್ಕ್‌ಗಳನ್ನು ತಾಲೂಕಿನ ವಿವಿಧ ಶಾಲೆಗಳಿಗೆ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಸಕರ ಅಭಿವೃದ್ಧಿ ಅನುದಾನದಿಂದ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ವಿವಿಧ ಅಭಿವೃದ್ಧಿಗಾಗಿ ₹1.40. ಕೋಟಿ ನೀಡಲಾಗುವುದು. ₹62 ಕೋಟಿ ವೆಚ್ಚದಲ್ಲಿ ಪಟ್ಟಣದ ಅಮೃತ ಜಲ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಪಟ್ಟಣದಲ್ಲಿ ನೂತನಾಗಿ ನಿರ್ಮಾಣವಾದ ಅಗ್ನಿಶಾಮಕ ದಳ ಠಾಣೆ ಉದ್ಟಾಟನೆಗೆ ಸಿದ್ಧವಾಗಿದ್ದು, ಠಾಣೆ ಮುಂಭಾಗ ರಸ್ತೆ ನಿರ್ಮಾಣ ಹಾಗೂ ಸಿಡಿ ನಿರ್ಮಾಣವಾದ ಕೂಡಲೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ, ಅಕ್ಷರ ದಾಸೋಹ ಅಧಿಕಾರಿ ಮಾರುತೇಪ್ಪ, ಶಿಕ್ಷಣ ಸಂಯೋಜಕ ಎನ್.ವಿ. ನಾಯಕ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹರಿಜನ, ವಿಜಯ ಅಂಗಡಿ, ಶಣ್ಮುಕಪ್ಪ ಮಳಗೋಂಡರ, ಹಾಲಪ್ಪ ಮಳಗೊಂಡರ, ಪಿ.ಡಿ. ಬಸನಗೌಡ್ರ, ವಾಸಣ್ಣ ದ್ಯಾವಕ್ಕಳವರ, ಹೇಮಣ್ಣ ಮುದಿರೆಡ್ಡೇರ, ಶಾಲಾ ಮುಖ್ಯೋಪಾಧ್ಯಾಯಿನಿ ಸರಸ್ವತಿ ಅಜ್ಜಪ್ಪನವರ ಮುಂತಾದವರು ಇದ್ದರು.