ಶಿಕ್ಷಣದೊಂದಿಗೆ ಕೌಶಲ್ಯವೂ ಬೇಕು: ಕೋಳಿವಾಡ

| Published : Sep 25 2025, 01:01 AM IST

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳಗಳಾದರೆ ಅವರು ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ತಮ್ಮ ಸ್ಥಾನವನ್ನು ತಾವೇ ನಿರ್ಮಿಸಿಕೊಳ್ಳಬೇಕು.

ಹಿರೇಕೆರೂರ: ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ನೀಡದೆ, ಶಿಕ್ಷಣದ ಜತೆ ಕೌಶಲ್ಯ ಅಭಿವೃದ್ಧಿ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಎಂ.ಕಾಂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಿರೇಕೆರೂರ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳಗಳಾದರೆ ಅವರು ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಸಾಧ್ಯವಿಲ್ಲ. ಶಿಕ್ಷಣದ ಜತೆಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ತಮ್ಮ ಸ್ಥಾನವನ್ನು ತಾವೇ ನಿರ್ಮಿಸಿಕೊಳ್ಳಬೇಕು. ಇಂದು ಭಾರತ ಆಧುನಿಕತೆಗೆ ಹೊಂದಿಕೊಂಡು ಮುಂದುವರೆವುದು ಅನಿವಾರ್ಯವಾಗಿದೆ. ತಂತ್ರಜ್ಞಾನವನ್ನು ಶಿಕ್ಷಣವನ್ನು ಜತೆ ಸೇರಿಸಿಕೊಂಡು ಮುನ್ನಡೆಯಬೇಕಿದೆ. ಉತ್ತರ ಕರ್ನಾಟಕದ ಯುವ ಜನತೆ ಉನ್ನತ ಹುದ್ದೆಗಳಿಂದ ವಂಚಿತರಾಗಬಾರದು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಸಹ ಉನ್ನತ ಸ್ಥಾನದಲ್ಲಿ ಕಾಣಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯಕ್ಕೂ ನಾನು ಸಿದ್ಧ ಎಂದರು.

ವಿದ್ಯಾರ್ಥಿ ಸಂಘದ ಉದ್ಘಾಟಿಸಿದ ಶಾಸಕ ಯು.ಬಿ. ಬಣಕಾರ ಮಾತನಾಡಿ, ವಿದ್ಯಾಥಿಗಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗೆಗಳು ಸಹ ಅಷ್ಟೇ ಮುಖ್ಯ. ಪಠ್ಯೇತರ ಚಟುವಟಿಕೆಗೆಗಳು ಮಾತ್ರ ವಿದ್ಯಾರ್ಥಿಯನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯ. ಕಾಲೇಜು ಹಂತದಲ್ಲೆ ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ವೃದ್ಧಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಭವಿಷ್ಯದ ಭಾರತ ಉಜ್ವಲವಾಗಲು ಸಾಧ್ಯ. ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಿತ ದೃಷ್ಠಿಯಿಂದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶೀಘ್ರದಲ್ಲೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪ್ರಾಚಾರ್ಯ ಡಾ. ನಾನಾಸಾಹೇಬ ಹಚ್ಚಡದ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಎಂ. ವಿಜಯಕುಮಾರ, ಸಿಬ್ಬಂದಿ ಕಾರ್ಯದರ್ಶಿ ಕಿರಣ ಬಾಗಲರ, ಪ್ರಧಾನ ಕಾರ್ಯದರ್ಶಿ ರಘು ಹಂಚಿನೇರ, ಉಪನ್ಯಾಸಕ ನಾಗರಾಜ ಉಪ್ಪಾರ, ಅಂಜುತಾ ಬಿ.ಎಂ, ಶಶಿಕುಮಾರ ಕಡೂರು, ಸರಸ್ವತಿ ಕಂಬಾಳಿಮಠ, ಸತೀಶ ಲಮಾಣಿ, ಪ್ರವೀಣ ಅಂಗಡಿ, ಪೂಜಾ ಅಡಗಂಟಿ, ಸಂಜೀವಕುಮಾರ, ಸಿ.ಆರ್. ದೂದೀಹಳ್ಳಿ, ರವಿಕುಮಾರ ಎಂ. ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.