ಈಐಡಿ ಕಾರ್ಖಾನೆ ಕರೆದ ಸಭೆ ಬಹಿಷ್ಕರಿಸಿದ ಕಬ್ಬು ಬೆಳೆಗಾರರು

| Published : Sep 25 2025, 01:01 AM IST

ಈಐಡಿ ಕಾರ್ಖಾನೆ ಕರೆದ ಸಭೆ ಬಹಿಷ್ಕರಿಸಿದ ಕಬ್ಬು ಬೆಳೆಗಾರರು
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಬೆಳೆಗಾರರ ಬೇಡಿಕೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿಯೇ ಸಭೆ ನಡೆಸಬೇಕೆಂಬ ಕಬ್ಬು ಬೆಳೆಗಾರರ ಬಿಗಿಪಟ್ಟಿಗೆ ಅಂತೂ ಮಣಿದ ತಾಲೂಕಾಡಳಿತ, ಕಬ್ಬು ಬೆಳೆಗಾರರ ಅಪೇಕ್ಷೆಯಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅ. 8ರಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸಿತು.

ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಅ. 8ರಂದು ಸಭೆ

ಜಿಲ್ಲಾಡಳಿತದ ತೀರ್ಮಾನ ಘೋಷಿಸಿದ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ

ಕನ್ನಡಪ್ರಭ ವಾರ್ತೆ ಹಳಿಯಾಳ

ಕಬ್ಬು ಬೆಳೆಗಾರರ ಬೇಡಿಕೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿಯೇ ಸಭೆ ನಡೆಸಬೇಕೆಂಬ ಕಬ್ಬು ಬೆಳೆಗಾರರ ಬಿಗಿಪಟ್ಟಿಗೆ ಅಂತೂ ಮಣಿದ ತಾಲೂಕಾಡಳಿತ, ಕಬ್ಬು ಬೆಳೆಗಾರರ ಅಪೇಕ್ಷೆಯಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅ. 8ರಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸಿತು.ಬುಧವಾರ ತಾಲೂಕ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಕಬ್ಬು ಬೆಳೆಗಾರರ ಸುದೀರ್ಘವಾದ ಸಭೆಯ ಕೊನೆಯಲ್ಲಿ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಜಿಲ್ಲಾಡಳಿತದ ತೀರ್ಮಾನ ಘೋಷಿಸಿದರು.ಸಭೆಯ ಅಧ್ಯಕ್ಷತೆ ಕುಮಟಾ ಸಹಾಯಕ ಆಯುಕ್ತ ಪಿ. ಶ್ರವಣಕುಮಾರ ವಹಿಸಿದ್ದರು. ಆಹಾರ ಇಲಾಖೆಯ ಸಹಾಯಕ ನಿದೇಶಕರು, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರ ಇದ್ದರು. ಹಳಿಯಾಳ, ಧಾರವಾಡ, ಕಲಘಟಗಿ ಹಾಗೂ ಅಳ್ನಾವರ ತಾಲೂಕಿನ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಸಭೆಯಲ್ಲಿದ್ದರು.ಸಭೆ ಬಹಿಷ್ಕರಿಸಿದ ಕಬ್ಬು ಬೆಳೆಗಾರರು:ಸೆ.24ರಂದು ಪಟ್ಟಣದ ಪುರಭವನದಲ್ಲಿ ಕಾರ್ಖಾನೆಯ ಅಧಿಕಾರಿಗಳು ಕರೆದ ಸಭೆಯನ್ನು ಕಬ್ಬು ಬೆಳೆಗಾರರು ಬಹಿಷ್ಕರಿಸಿ, ತಾಲೂಕು ಆಡಳಿತ ಸೌಧಕ್ಕೆ ತೆರಳಿ ಕಾರ್ಖಾನೆಯ ಪ್ರತಿನಿಧಿ ಕರೆಯಿಸಿ ಸಭೆ ನಡೆಸಬೇಕೆಂದು ಪಟ್ಟು ಹಿಡಿದರು. ಕಬ್ಬು ಬೆಳೆಗಾರರ ಅಪೇಕ್ಷೆಯನ್ನು ಕಾರ್ಖಾನೆ ಪ್ರತಿನಿಧಿಗಳಿಗೆ ತಿಳಿಸಿ ಮನವರಿಕೆ ಮಾಡುವ ಪ್ರಯತ್ನವನ್ನು ತಾಲೂಕಾಡಳಿತ ನಡೆಸಿತಾದರೂ, ಕಾರ್ಖಾನೆಯ ಪ್ರತಿನಿಧಿಗಳು ಪುರಭವನ ಬಿಟ್ಟು ತಾಲೂಕಾಡಳಿತ ಸೌಧದಲ್ಲಿ ಸಭೆ ನಡೆಸಲು ಮುಂದಾಗಲಿಲ್ಲ. ಹೀಗೆ ಈ ಹಗ್ಗ ಜಗ್ಗಾಟ ಮಧ್ಯಾಹ್ನದವರೆಗೆ ಮುಂದುವರೆಯಿತು. ಕಾರ್ಖಾನೆಯ ಮೊಂಡುತನವು ಕಬ್ಬು ಬೆಳೆಗಾರರನ್ನು ಕೆರಳಿಸಿತ್ತು. ಈ ಮಧ್ಯೆ ಸಹಾಯಕ ಆಯುಕ್ತರು ಸೇರಿದಂತೆ ಇತರೇ ಅಧಿಕಾರಿಗಳು ಪುರಭವನದಲ್ಲಿ ಕಾರ್ಖಾನೆಯವರು ಕರೆದ ಸಭೆಗೆ ತೆರಳಿ ಮಾತುಕತೆ ನಡೆಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಅಧಿಕಾರಿಗಳ ನಿಲುವನ್ನು ಖಂಡಿಸಿದ ಕಬ್ಬು ಬೆಳೆಗಾರ ಪ್ರಮುಖರಾದ ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ, ಅಶೋಕ ಮೇಟಿ, ಧಾರವಾಡ ಜಿಲ್ಲಾ ಪ್ರಮುಖರಾದ ಮಹೇಶ ಬೆಳಗಾಂವಕರ ಇತರರು ಅಧಿಕಾರಿ ವೃಂದವು ರೈತರ ಸಮಸ್ಯೆ ಇತ್ಯರ್ಥ ಪಡಿಸುವುದನ್ನು ಬಿಟ್ಟು ಕಾರ್ಖಾನೆಯ ಗುಲಾಮಗಿರಿ ಮಾಡಲು ಪ್ರಚೋದಿಸುತ್ತಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಬಿಗಿಪಟ್ಟಿಗೆ ಕೊನೆಗೂ ಮಣಿದ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಕರೆಮಾಡಿ ಹಳಿಯಾಳದ ವಿದ್ಯಮಾನ ಮನವರಿಕೆ ಮಾಡಿ, ತದನಂತರ ಸಭೆಗೆ ಬಂದು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ತಿಳಿಸಿ, ಅ. 8ರಂದು ಸಭೆ ನಡೆಸಲಾಗುವದೆಂದು ತಿಳಿಸಿದರು.ನಿರ್ಣಯ ಕೈಗೊಳ್ಳುವರು ಬರಬೇಕು:ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಸ್ಥಳದಲ್ಲಿಯೇ ನಿರ್ಣಯ ಕೈಗೊಳ್ಳುವ ಕಾರ್ಖಾನೆಯ ಪ್ರಮುಖ ಅಧಿಕಾರಿಗಳು ಸಭೆಗೆ ಹಾಜರಾಗಬೇಕೆ ಹೊರತು, ಅವರ ರಾಯಭಾರಿಗಳಲ್ಲ ಎಂದು ಬೇಡಿಕೆಯನ್ನಿಟ್ಟರು.