ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ಅಪಪ್ರಚಾರ: ಕ್ರಮಕ್ಕೆ ಆಗ್ರಹ

| Published : Jun 25 2024, 12:33 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ಅಪಪ್ರಚಾರ: ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಬ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದ್ದು, ಅಂತವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಸಹಿತ ಪ್ರಮುಖರು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಡವರ ಅಭಿವೃದ್ಧಿಗಾಗಿ ರೂಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಬ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದ್ದು, ಅಂತವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಸಹಿತ ಪ್ರಮುಖರು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಆರ್.ಬಿ.ಐ. ನಿಯಮದಂತೆ ದೇಶದ ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿದೆ. ಬ್ಯಾಂಕ್‌ಗಳಿಂದ ಸ್ವಸಹಾಯ ಸಂಘಗಳಿಗೆ ನೇರವಾಗಿ ಸಾಲ ಸೌಲಭ್ಯ ನೀಡುತ್ತಿರುವುದರಿಂದ ಶೇ.13.5 ಬಡ್ಡಿದರದಲ್ಲಿ ಒಂದು ಸಂಘಕ್ಕೆ ಗರಿಷ್ಠ 25 ಲಕ್ಷ ರು.ವರೆಗೆ ಸಾಲ ದೊರೆಯುತ್ತಿರುವುದು ದೇಶದಲ್ಲೇ ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿದೆ. ಪ್ರಸ್ತುತ ದ.ಕ. ಮತ್ತು ಉಡುಪಿ ಉಭಯ 46,972 ಸ್ವಸಹಾಯ ಸಂಘಗಳಿದ್ದು 2,761 ಕೋಟಿ ರೂ. ಮೊತ್ತದ ಹೊರಬಾಕಿ ಇರುತ್ತದೆ. 20. ವರ್ಷಗಳಿಗಿಂತಲೂ ಹೆಚ್ಚು ಅವಧಿಯ ಸ್ವಸಹಾಯ ಸಂಘಗಳು ಕರಾವಳಿಯ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಿರು ಆರ್ಥಿಕ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆಯಲ್ಲಿರುವ ಉಳಿದ ಎಲ್ಲ ಸಂಸ್ಥೆಗಳು ಲಾಭದಾಯಕ ಉದ್ದೇಶಿತ ಸಂಸ್ಥೆಗಳಾಗಿದ್ದರೆ ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ನೋಂದಾಯಿತವಾದ ಸಂಸ್ಥೆಯಾಗಿದೆ. ಪ್ರಸ್ತುತ ವರ್ಷದಲ್ಲಿ ಪ್ರತಿ ತಿಂಗಳು 40 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ, 17 ಸಾವಿರ ವೃದ್ಧಾಪ್ಯ ಕಡುಬಡವರಿಗೆ ಪ್ರತಿತಿಂಗಳು ಮಾಸಾಶನ ಸಹಿತ ನೂರಾರು ಸಾಮಾಜಿಕ ನೆರವಿನ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಲಾಗಿದೆ.

ಆದರೆ ಕೆಲವು ತಿಂಗಳುಗಳಿಂದ ‘ಗ್ರಾಮಾಭಿವೃದ್ಧಿ ಯೋಜನೆಯ ಸಾಲ ವನ್ನು ಯಾರೂ ಕಟ್ಟಬೇಡಿ’, ‘ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಇತ್ಯಾದಿ ಸುಳ್ಳು ಸುದ್ದಿಗಳನ್ನು ಗ್ರಾಮೀಣ ಮುಗ್ಧ ಜನತೆಗೆ ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತಿದ್ದಾರೆ. ಇವುಗಳಿಂದ ಕರಾವಳಿ ಪ್ರದೇಶದ ಸಜ್ಜನರು ತೀವ್ರ ನೊಂದಿದ್ದಾರೆ.

ಈ ಕುರಿತು ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು, ಎಸ್.ಬಿ.ಐ. ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಸದಾಶಿವ ಶೆಟ್ಟಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.