ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ಬೇಸಿಗೆಯು ಕಳೆದು ಮುಂಗಾರು ಹಂಗಾಮು ಸಮೀಪಿಸುತ್ತಿದ್ದು, ಇನ್ನು ಕೃಷಿ ಕಾರ್ಯಗಳು ಚುರುಕಾಗುತ್ತವೆ.ಈಗ ರೈತರಿಗೆ ಎತ್ತುಗಳ ಆವಶ್ಯಕತೆ ಹೆಚ್ಚಾಗಿ ಇದೆ. ಆದರೆ ಎತ್ತಿನ ಬೆಲೆ ಗಗನಕ್ಕೇರಿದೆ. ಖರೀದಿಗೆ ಹೋದ ರೈತರು ದಂಗಾಗಿ ಹೋಗುತ್ತಿದ್ದಾರೆ.ಪಟ್ಟಣದಲ್ಲಿ ಪ್ರತಿ ಭಾನುವಾರ ದನದ ಸಂತೆ ನಡೆಯುತ್ತದೆ. ಈ ದನದ ಸಂತೆಯಲ್ಲಿ ಕೊಪ್ಪಳ, ಬಾಗಲಕೋಟೆ, ರಾಯಚೂರು, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಗ್ರಾಮಗಳ ರೈತರು ಬಂದು ವ್ಯಾಪಾರ-ವಹಿವಾಟು ನಡೆಸುತ್ತಾರೆ. ಈ ವಾರದ ಸಂತೆಯಲ್ಲಿ ಒಂದು ಜೋಡಿ ಎತ್ತಿನ ಬೆಲೆ ಒಂದು ಲಕ್ಷ ರು.ಗೂ ಅಧಿಕವಾಗಿದೆ. ಮಧ್ಯಮ ಹಾಗೂ ಬಡ ರೈತರು ಎತ್ತು ಖರೀದಿಸುವುದು ಕಷ್ಟಸಾಧ್ಯವಾಗಿದೆ.
ಈ ವರ್ಷ ಮುಂಗಾರು ಪೂರ್ವದಲ್ಲಿಯೇ ಮಳೆಯಾಗುತ್ತಿದೆ. ರೈತರು ಬಿತ್ತನೆ ಪೂರ್ವ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಕೆಲವರು ಎತ್ತು ಖರೀದಿಸಲು ಸಂತೆಗೆ ಆಗಮಿಸುತ್ತಿದ್ದಾರೆ.ಎರಡು ವಾರಗಳ ಹಿಂದೆ ಒಂದು ಜೋಡಿಗೆ ₹60-70 ಸಾವಿರ ಇತ್ತು. ಬೇಡಿಕೆ ಹೆಚ್ಚಿದ್ದರಿಂದ ಈ ಬಾರಿ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಕೆಲವು ಬಡ ರೈತರು ಎತ್ತು ಖರೀದಿಸಲು ಸಾಧ್ಯವಾಗದೇ ನಿರಾಸೆಯಿಂದ ಮರಳಿದ್ದಾರೆ. ಬಿತ್ತನೆಗೆ ಸಿದ್ಧವಾಗುತ್ತಿರುವ ರೈತರು ಪರ್ಯಾಯ ಮಾರ್ಗ ಹುಡುಕುವಂತಾಗಿದೆ.
ಎತ್ತುಗಳ ಬೆಲೆ: ಕಿಲಾರಿ ಎತ್ತುಗಳು ₹1 ಲಕ್ಷದಿಂದ ₹1.30 ಲಕ್ಷದ ವರೆಗೂ ಮಾರಾಟವಾಗುತ್ತಿವೆ. ಸೀಮೆ ಎತ್ತುಗಳು ₹70ರಿಂದ 80 ಸಾವಿರ, ಜವಾರಿ ಎತ್ತುಗಳು ₹60ರಿಂದ ₹75 ಸಾವಿರ, ಸಾಮಾನ್ಯ ತಳಿ ಎತ್ತುಗಳಿಗೆ ₹30ರಿಂದ ₹40 ಸಾವಿರಕ್ಕೆ ಮಾರಾಟವಾದವು.ಎತ್ತುಗಳ ಖರೀದಿಗಾಗಿ ಕುಕನಪಳ್ಳಿ, ರೋಣ ಮತ್ತಿತರ ಕಡೆಗಳಲ್ಲಿ ಸಂತೆ ಸುತ್ತಾಡಿ ಸುಸ್ತಾಯಿತು. ಆದರೆ ಉತ್ತಮ ಎತ್ತುಗಳು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಅವುಗಳ ಬೆಲೆ ದುಬಾರಿಯಾಗಿದೆ ಎಂದು ಸೋಮಲಾಪುರ ರೈತ ಭರಮಪ್ಪ ಉಪ್ಪಾರ ಅಳಲನ್ನು ತೋಡಿಕೊಂಡರು.
ಕಳೆದ ಮೂರು ತಿಂಗಳ ಹಿಂದೆ ನಮ್ಮಲ್ಲಿರುವ ಎತ್ತುಗಳನ್ನು ₹70 ಸಾವಿರಕ್ಕೆ ಮಾರಾಟ ಮಾಡಿದ್ದೇವೆ. ಆದರೆ ಈಗ ಎತ್ತುಗಳನ್ನು ಖರೀದಿಸಲು ಬಂದಿರುವೆ. ಒಂದು ಜೋಡಿ ಎತ್ತುಗಳಿಗೆ ₹1.20 ಲಕ್ಷ ಹೇಳುತ್ತಿದ್ದಾರೆ. ₹1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಉತ್ತಮ ತಳಿಯ ಎತ್ತುಗಳು ಸಿಗುತ್ತಿಲ್ಲ. ಇದರಿಂದ ಏನು ಮಾಡಬೇಕು ಎಂಬುದು ತೋಚದಂತಾಗಿದೆ ಎಂದು ಬೇವೂರು ರೈತ ರಾಮಪ್ಪ ಗೌಡರ ಹೇಳುತ್ತಾರೆ.ಕಳೆದ ಎರಡು ವಾರಗಳಿಂದ ಎತ್ತುಗಳ ಖರೀದಿಗಾಗಿ ತಿರುಗಾಡುತ್ತಿದ್ದು, ಉತ್ತಮವಾದ ಎತ್ತುಗಳು ಸಿಕ್ಕಿದ್ದಿಲ್ಲ. ಈ ವಾರ ಸಿಕ್ಕಿವೆ. ದುಬಾರಿಯಾದರೂ ಸಹಿತ ಕೃಷಿ ಕಾರ್ಯಗಳಿಗೆ ಬೇಕಾಗಿದ್ದು 1.20 ಲಕ್ಷಕ್ಕೆ ಖರೀದಿಸಿದ್ದೇನೆ ಎಂದು ನಿಡಶೇಸಿ ರೈತ ಶ್ರೀಶೈಲಪ್ಪ ಹೇಳುತ್ತಾರೆ.