ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುತಾಲೂಕಿನ ಕಡಕೊಳ ಗ್ರಾಮದ ಬಳಿಯ ಉಂಡುಬತ್ತಿನ ಕೆರೆ ಮತ್ತೆ ನರಬಲಿಗಾಗಿ ಕಾಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕಡಕೊಳ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಮುಗ್ಧ ಜೀವಿಗಳನ್ನು ಬಲಿ ಪಡೆದು ಮತ್ತೊಂದು ದುರಂತದ ನಿದರ್ಶನಕ್ಕೆ ನಾಂದಿಯಾಗಲಿದೆ.ರಾಷ್ಟ್ರೀಯ ಹೆದ್ದಾರಿ 766ರ ಕಡಕೊಳ ಸಮೀಪ ಉಂಡು ಬತ್ತಿಕೆರೆಯು ವರಣಾ ನಾಲೆಗೆ ನೀರು ಬಿಟ್ಟ ಪರಿಣಾಮ ಮತ್ತು ಉತ್ತಮ ಮಳೆಯಿಂದಾಗಿ ತುಂಬಿದೆ. ಕೆರೆಯ ಮುಂಭಾಗದಲ್ಲಿ ಅದರ ಆಳದಷ್ಟೇ ಹಳ್ಳವೂ ಇದೆ. ಈ ಕೆರೆಯ ಎರಡು ಬದಿಯಲ್ಲಿ ತಡೆ ಗೋಡೆ ಹಾಕಿದ್ದು ಅಪಾರ ಪ್ರಮಾಣದ ಮರ-ಗಿಡ ಹಾಗೂ ಪೊದೆಗಳು ಬೆಳೆದು ತಡೆಗೋಡೆಗಳನ್ನು ಮರೆಮಾಚಿವೆ.ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಚಾಮರಾಜನಗರ, ಗುಂಡ್ಲುಪೇಟೆ, ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುತ್ತದೆ. ವಾಹನ ಸವಾರರಿಗೆ ಪಕ್ಕದಲ್ಲಿ ಭರ್ತಿಯಾದ ಕೆರೆ ಇದೆ ಎಂಬುದು ಗೋಚರಿಸುವುದಿಲ್ಲ. ಇದರ ಜೊತೆಗೆ ಯಾವುದೇ ರೀತಿಯ ಸೂಚನಾ ಫಲಕಗಳು ಕೂಡ ಇಲ್ಲ. ಏನಾದರೂ ಅವಘಡ ನಡೆದರೆ ನೇರವಾಗಿ ವಾಹನಗಳು ಕೆರೆಗೆ ಬೀಳುವ ಸಂಭವವಿದೆ.2010ರ ಡಿ. 14ರಂದು ನಂಜನಗೂಡಿಂದ ಪ್ರಯಾಣಿಕರನ್ನು ತುಂಬಿಕೊಂಡು ಬಂದ ಮಿನಿ ಟೆಂಪೋ ಅಪಘಾತದಿಂದ ಕೆರೆಗೆ ಉರುಳಿ ಸುಮಾರು 31 ಮಂದಿ ಜೀವಂತ ಜಲ ಸಮಾಧಿಯಾಗಿ ಐದು ಮಂದಿ ಗಾಯಗೊಂಡು ದೇಶಾದ್ಯಂತ ಸುದ್ದಿಯಾಗಿತ್ತು.ಈ ಘಟನೆ ನಂತರ ಕಡಕೊಳ ಗ್ರಾಮಸ್ಥರು ರಸ್ತೆ ವಿಸ್ತರಣೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಅಗ್ರಹಿಸಿ ಪ್ರತಿಭಟನೆ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಲಾಠಿ ಚಾರ್ಜ್ ನಡೆದು ಅಶ್ರುವಾಯು ಪ್ರಯೋಗಿಸಿ ವಿದ್ಯಾರ್ಥಿಗಳು ಕೂಲಿಕಾರ್ಮಿಕರು ಅಮಾಯಕರು ಸೇರಿದಂತೆ 10 ಮಂದಿಯನ್ನು ಬಂಧಿಸಿ 75ಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಅಲೆಯುವಂತಾಗಿತ್ತು.ಈ ಘಟನೆ ನಡೆದ ಏಳು ವರ್ಷದ ನಂತರ ಸರ್ಕಾರ ವಾಸ್ತವತೆಯನ್ನು ಅರಿತು ಪ್ರಕರಣ ಹಿಂಪಡೆದಿತ್ತು. ಇದಾದ ನಂತರ ರಸ್ತೆ ವಿಸ್ತರಣೆಗೊಂಡು ಕೆರೆಯ ಎರಡು ಬದಿಯಲ್ಲಿ ತಡೆಗೋಡೆಗಳು ನಿರ್ಮಾಣ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಕೆರೆ ಕಾಣದಂತೆ ಗಿಡಗಂಟೆಗಳು ಬೆಳೆದು ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದು ಇದು ಅವರ ಸಮಯ ಪ್ರಜ್ಞೆ ಮತ್ತು ಕಾರ್ಯವೈಖರಿಗೆ ಹಿಡಿದ ಕೈಗಡಿ.ಕೂಗಳತೆ ದೂರದಲ್ಲೇ ಟೋಲ್ ಸಂಗ್ರಹಿಸುವ ಕೇಂದ್ರವಿದ್ದು ದಿನಂಪ್ರತಿ ಲಕ್ಷಾಂತರ ರೂ. ಟೋಲ್ ಸಂಗ್ರಹಣೆ ಕೂಡ ನಡೆಯುತ್ತಿದೆ. ಅಲ್ಲದೆ ಪ್ರತಿದಿನ ಹಲವಾರು ಹಿರಿಯ ಅಧಿಕಾರಿಗಳು ಹಾಗೂ ಹಲವಾರು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಈ ಅವ್ಯವಸ್ಥೆ ಅವರ ಕಣ್ಣಿಗೆ ಕಾಣದಿರುವುದು ಆಶ್ಚರ್ಯವೇ ಸರಿ.ಮತ್ತೊಂದು ದುರಂತವಾಗುವ ಮುನ್ನ ಕೂಡಲೇ ಅಧಿಕಾರಿ ವರ್ಗ ಎಚ್ಚೆತ್ತು ಗಿಡಗಂಟೆಗಳನ್ನು ತೆರವುಗೊಳಿಸಿ ಸೂಚನಾ ಫಲಕ ಅಳವಡಿಸಿ ತಡೆ ಗೊಡೆಯನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಕಡಕೊಳ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ತಪ್ಪಿದರೆ ಕೆರೆ ಮುಂದೆ ಅಣುಕು ಶವಗಳ ಪ್ರದರ್ಶನವನ್ನು ಏರ್ಪಡಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.