ಸಾರಾಂಶ
ರಾಮನಗರ: ತಮ್ಮ ಜೀವನಾನುಭವಗಳ ಮೂಲಕ ಇಂದಿನ ಸಮಾಜಕ್ಕೆ ಉತ್ತಮ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು ಹಿರಿಯರಾದ ತಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿರಿಯ ನಾಗರಿಕರನ್ನು ದೇವರ ಸ್ಥಾನದಲ್ಲಿ ಇರಸಿ ಪೂಜಿಸಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮಾನವೀಯತೆಯ ಮೌಲ್ಯಗಳು ಕಡಿಮೆಯಾಗುತ್ತಿವೆ. ವಯಸ್ಸಾದ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ, ಹಿರಿಯ ನಾಗರಿಕರ ಮೇಲೆ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಇದಕ್ಕೆ ಮಾನವೀಯ ಮೌಲ್ಯಗಳ ಕೊರತೆಯೇ ಕಾರಣ. ಆದ್ದರಿಂದ ಆಧುನಿಕತೆಯ ಅಭಿವೃದ್ಧಿಗೆ ತಕ್ಕಂತೆ ಮಾನವೀಯ ಮೌಲ್ಯಗಳ ವೃದ್ಧಿಯೂ ಅವಶ್ಯಕವಾಗಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲಾಗುತ್ತಿದೆ, ಅದರಂತೆಯೇ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರವೃತ್ತಿ ಹೆಚ್ಚಾಗಬೇಕು, ಅದು ಏನಿದ್ದರೂ ಮನೆಯಲ್ಲಿನ ಹಿರಿಯ ನಾಗರಿಕರ ಅನುಭವದ ಮಾರ್ಗದರ್ಶನದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಎಂಟು ಸಾವಿರ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಜಮೀನನ್ನು ಗುರುತಿಸಲಾಗಿದೆ, ಇದರಿಂದ ಮನೆಯಿಲ್ಲದ ಬಡ ಜನರಿಗೆ ಮನೆಯನ್ನು ಒದಗಿಸಲಾಗುತ್ತದೆ, ಜಿಲ್ಲೆಯಲ್ಲಿ ಕನ್ನಡ ಭವನ ಹಾಗೂ ಹಿರಿಯರಿಗಾಗಿ ಒಂದು ಸಮುದಾಯ ಭವನ ನಿರ್ಮಿಸಲು ಹಲವು ಮನವಿಗಳು ಬಂದಿದ್ದವು, ಅವುಗಳ ನಿರ್ಮಾಣಕ್ಕೆ ನಿರ್ದಿಷ್ಟವಾದ ಜಮೀನನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎನ್. ನಟರಾಜ್ ಗಾಣಕಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಗುರುತಿನ ಚೀಟಿ, ಪಿಂಚಣಿ ಯೋಜನೆ, ಆರೋಗ್ಯ ಶಿಬಿರಗಳು, ಇನ್ನೂ ಅನೇಕ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಹಿರಿಯ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣ ಅಧಿಕಾರಿಗಳಾದ ಕೆ.ವಿ. ಜ್ಯೋತಿ ಮಾತನಾಡಿ, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.12 ಹಾಗೂ ನಮ್ಮ ರಾಜ್ಯದಲ್ಲಿ ಶೇ.7.7 ರಷ್ಟು ಹಿರಿಯ ನಾಗರಿಕರಿದ್ದಾರೆ. ಅವರಿಗಾಗಿ 2003ರಲ್ಲಿ ಹಿರಿಯ ನಾಗರಿಕರ ನೀತಿಯನ್ನು ಜಾರಿಗೆ ತರಲಾಯಿತು. ಜಿಲ್ಲೆಯಲ್ಲಿ ಒಟ್ಟು 3 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಕೇಂದ್ರ ಹಾಗೂ ಎರಡು ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಾಗೂ ಇತರೆ ಮಾಹಿತಿಗಳನ್ನು ಪಡೆಯಲು 1090 ಸಹಾಯವಾಣಿಯನ್ನು ಸಂಪರ್ಕಿಸಬಹುದು. ಜಿಲ್ಲೆಯಲ್ಲಿ ಈಗಾಗಲೇ ದೂರವಾಣಿ ಮುಖಾಂತರ 8,593 ಕರೆಗಳು ಬಂದಿವೆ ಎಂದು ತಿಳಿಸಿದರು.
ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ, ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಸ್.ಸಿ. ಪದ್ಮರಾಜ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳಾದ ಶಿವಕುಮಾರ್, ಜಿಲ್ಲಾ ನಿರೂಪಣಾಧಿಕಾರಿಗಳಾದ ಪ್ರಸನ್ನ ಕುಮಾರ್ ಡಿ.ಆರ್, ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಕೂ.ಗಿ. ಗಿರಿಯಪ್ಪ, ಸಮಾಜ ಸೇವಕರಾದ ಜಯಮ್ಮ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.157 ಕೋಟಿ ರು. ವೆಚ್ಚದಲ್ಲಿ ವಾಕಿಂಗ್ ಪಾರ್ಕ್
ನಮ್ಮ ಜಿಲ್ಲೆಯಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಅರ್ಕಾವತಿ ನದಿಯ ಎಡ ಮತ್ತು ಬಲ ದಂಡೆಯ ಸುಮಾರು ಒಂದುವರೆ ಕಿ.ಮೀ ವ್ಯಾಪ್ತಿಯಲ್ಲಿ 157 ಕೋಟಿ ರು.ಗಳ ವೆಚ್ಚದಲ್ಲಿ ವಾಕಿಂಗ್ ಪಾರ್ಕ್ ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲಾ ಕ್ರೀಡಾಂಗಣವನ್ನು 20 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ, ಡ್ರೆಸ್ಸಿಂಗ್ ರೂಮ್, ವ್ಯಾಯಾಮ ಶಾಲೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.