ಸಂಸಾರದಲ್ಲಿ ಸಂಕಷ್ಟಗಳನ್ನು ಮೆಟ್ಟಿ ಮುನ್ನಡೆಯಿರಿ

| Published : Oct 02 2024, 01:00 AM IST

ಸಾರಾಂಶ

‘ಮರೆಯಲಾಗದ ಮಹನೀಯರು’ ಕಾರ್ಯಕ್ರಮದಲ್ಲಿ ಡಾ. ಮಹೇಶ ಪಾಟೀಲ್‌ ಸಲಹೆ

ಕನ್ನಡಪ್ರಭ ವಾರ್ತೆ ಬೀದರ್‌

ಸಂಕಷ್ಟದ ಜೀವನದಲ್ಲೂ ಸಚ್ಚಾರಿತ್ರ್ಯದ ಬದುಕು ರೂಪಿಸಿಕೊಂಡು ಸಾಹಿತ್ಯ, ಸಾಂಸ್ಕೃತಿಕ, ವೈಚಾರಿಕ ನಿಲುವು ಕರಗತ ಮಾಡಿಕೊಂಡ ಕೃಷಿ ಇಲಾಖೆಯ ಆಡಳಿತಾಧಿಕಾರಿಗಳಾಗಿ ನಿವೃತ್ತರಾದ ಗುರುಶಾಂತಪ್ಪ ನಿಂಗದಳ್ಳಿ ನಮಗೆಲ್ಲ ಆದರ್ಶ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ. ಮಹೇಶ ಪಾಟೀಲ್‌ ನುಡಿದರು.

ಜಿಲ್ಲಾ ಕಸಾಪ ಹಾಗೂ ತಾಲೂಕು ಮಹಿಳಾ ಘಟಕ ಸಹಯೋಗದೊಂದಿಗೆ ಮಹೇಶ ನಗರದಲ್ಲಿ ‘ಮರೆಯಲಾಗದ ಮಹನೀಯರು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಗಳಿಕೆಕ್ಕಿಂತ ನೆಮ್ಮದಿ ಮುಖ್ಯ. ಸಂಸಾರದಲ್ಲಿ ಸಂಕಷ್ಟ ಸಹಜ ಅದನ್ನು ಸಂತುಷ್ಟನ್ನಾಗಿಸಿಕೊಂಡು ಮುನ್ನಡೆಯುವುದೇ ಬದುಕಿನ ಅರ್ಥ ಎಂದು ಹೇಳಿದರು.

ಗುರುಶಾಂತಪ್ಪ ನಿಂಗದಳ್ಳಿಯವರು ಕೃಷಿ ಅಧಿಕಾರಿಯಾಗಿ ಮೂರು ಮಕ್ಕಳ ಜೊತೆಗೆ ಸಹೋದರನ ಮಕ್ಕಳನ್ನು ಡಾಕ್ಟರ್‌ ಮಾಡಿ, ತನ್ನ ಅನುಭವದಿಂದ ಮೂಡಿಬಂದ ವಿಚಾರ ಧಾರೆಗಳನ್ನು ವಚನ ಬಿಂಬ ಕವನ ಸಂಕಲನವನ್ನು ಬಸವಪ್ರಿಯ ಮಿತ್ರರೆಂಬ ಕಾವ್ಯನಾಮದಿಂದ ಸಾಹಿತ್ಯ ಲೋಕಕ್ಕೂ ಛಾಪು ಮೂಡಿಸಿಕೊಂಡವರು ಎಂದರು.

ಅವರು ಶರಣ ಸಂಸ್ಕೃತಿ ಉತ್ಸವ, ಬಸವ ಕೇಂದ್ರ, ವಚನ ವೈಭವ ಸಂಸ್ಥೆ ಹುಟ್ಟು ಹಾಕಿ ಇಂದಿಗೂ ಅವರು ಹಾಕಿದ ದಾರಿಯಲ್ಲೇ ನಡೆದಿರುವುದು ಸಂತಸ ಮೂಡಿಸಿದೆ. ವ್ಯಕ್ತಿ ಇದ್ದಾಗ ಸ್ಮರಣೆ ಸಹಜ. ಅವರಿರದೇ ಇದ್ದಾಗ ಅವರ ವಿಚಾರ ಚಿಂತನೆ, ನಡೆದು ಬಂದ ದಾರಿ ಅವಲೋಕನ ಸಮಾಜಕ್ಕೊಂದು ದಿಗ್ಧರ್ಶನವಾಗಬಲ್ಲದು ಎಂದು ತಿಳಿಸಿದರು.

ದಲಿತ ಸಾಹಿತ್ಯ ಅಕಾಡೆಮಿಯ ಪ್ರಖರ ವಿಚಾರವಾದಿ ಚಂದ್ರಕಾಂತ ಪೋಸ್ತೆ ಮಾತನಾಡಿ, ಗುರುಶಾಂತಪ್ಪ ಅವರು ಯಾವುದೇ ಕಷ್ಟ ಬಂದರೂ ವಿಚಲಿತರಾಗದೆ ಬಂದಿದ್ದು ಬರಲಿ ಬಸವ ಗುರುವಿನ ದಯೆ ಇರಲಿ ಎಂಬ ನಿಲುವಿನ ಆತ್ಮವಿಶ್ವಾಸದ ಘನವ್ಯಕ್ತಿತ್ವ ಉಳ್ಳವರಾಗಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋರ್ಟಾ (ಬಿ) ಗ್ರಾಮದ ಅನುಭಾವಿಗಳಾದ ಶಿವಕುಮಾರ ಮಾಶೆಟ್ಟಿ, ಕೃಷಿ ವಿಜ್ಞಾನಿ ಡಾ. ಜಗದೀಶ ಜಾಬಾ, ವಚನ ಸೌಹಾರ್ದ ಪತ್ತಿನ ಸಹಕಾರದ ನಿರ್ದೇಶಕಿ ಪ್ರತಿಭಾ ಜೀರ್ಗೆ ಮಾತನಾಡಿದರು. ಜಿಲ್ಲೆಯ ಶರಣರ ವಿಚಾರ ಧಾರೆ ಚಿತ್ರರೂಪಕ್ಕೆ ಅಳವಡಿಸಿ ದಾಖಲೆ ಮಾಡುತ್ತಿರುವ ಚ.ಭಿ ಸೋಮಶೆಟ್ಟಿ ಅವರನ್ನು ಗೌರವಿಸಲಾಯಿತು.

ಕಸಾಪ ಸಂಚಾಲಕ ವಿಜಯಕುಮಾರ ಗೌರೆ ಸ್ವಾಗತಿಸಿದರೆ, ಕಾರ್ಯದರ್ಶಿ ಟಿ.ಎಂ. ಮಚ್ಚೆ ಆಶಯ ನುಡಿಗಳನ್ನಾಡಿದರು. ವಚನ ವೈಭವ ಸಮಿತಿ ಅಧ್ಯಕ್ಷರಾದ ರೇವಣಪ್ಪ ಮೂಲಗೆ ನಿರೂಪಿಸಿ ಡಾ.ಭಗವಂತಪ್ಪ ನಿಂಗದಳ್ಳಿ ವಂದಿಸಿದರು. ಕಸಾಪದ ಪ್ರೊ.ಶಿವಕುಮಾರ ಕಟ್ಟೆ, ವೀರಶೆಟ್ಟಿ ಚನ್ನಶಟ್ಟಿ, ಬಾಬು ದಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.