ಸಾರಾಂಶ
ಕನ್ನಡಪ್ರಭಾರ್ತೆ ಚಿತ್ರದುರ್ಗಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ರವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನೀಲಕಂಠೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ಭ್ರಷ್ಟಚಾರ, ದುರ್ನಡತೆ ಮತ್ತು ಸುಲಿಗೆ ಮುಂತಾದ ಕ್ರಿಮಿನಲ್ ಕೇಸ್‍ನಲ್ಲಿ ಭಾಗಿಯಾಗಿರುವ ಎಡಿಜಿಪಿ ಎಂ. ಚಂದ್ರಶೇಖರ್ ಅಧಿಕಾರಿಯಾಗಿರಲು ಅರ್ಹರಲ್ಲ. ರಾಜ್ಯ ಸರ್ಕಾರ ಕೂಡಲೇ ಶಿಸ್ತು ಕ್ರಮಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರಯಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ, ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪೊಲೀಸ್ ಅಧಿಕಾರಿಯಾಗಿದ್ದು, ಮೂಲತಃ ಹಿಮಾಚಲ ಪ್ರದೇಶದ ಐಪಿಎಸ್ ಕೇಡರ್ ಆಗಿದ್ದಾರೆ. ಪತ್ನಿಯ ಅನಾರೋಗ್ಯ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ರಾಜಕೀಯ ಪ್ರಭಾವವನ್ನು ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು ಕರ್ನಾಟಕ ಐಪಿಎಸ್ ಕೇಡರ್ ನಲ್ಲಿ ವಿಲೀನಗೊಂಡಿದ್ದಾರೆಂದು ಆರೋಪಿಸಿದರು.
ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಮಾತನಾಡಿ, ವಿಜಯ ಟಾಟಾ, ಅವರ ವಿರುದ್ಧ ಸುಮಾರು 500 ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಉದಾಸೀನ ತೋರಿದ್ದಾರೆ. ಅನೇಕ ಪ್ರಕರಣಗಳಲ್ಲಿ ತನ್ನ ಅಧಿಕಾರ ದರ್ಪದಿಂದ ಡಿವೈಎಸ್‍ಪಿ, ಪಿಎಸ್ಐ ಗಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಹಣ ಲಪಾಟಿಯಿಸಿದ್ದಾರೆ ಎಂದು ಆರೋಪಿಸಿದರು.ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಮತ್ತು ವಿಚಾರಣೆಯನ್ನು ಬಯಸಿರುವ ವಿಷಯ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದ ಹಿನ್ನಲೆ ಗಮನದಲ್ಲಿಟ್ಟುಕೊಂಡು ಈ ಮಾಹಿತಿ ರಾಜ ಭವನದಿಂದ ಸೋರಿಕೆಯಾಗಿದೆ ಎಂದರು.
ರಾಜ್ಯಪಾಲರ ಕಚೇರಿ ಮೇಲೆ ತನಿಖೆ ನಡೆಸುವ ದರ್ಪವನ್ನು ಚಂದ್ರಶೇಖರ್ ಮೆರೆದಿದ್ದರೆಂದು ಕುಮಾರಸ್ವಾಮಿ ಮಾತನಾಡಿದ್ದರು. ಪ್ರತಿಯಾಗಿ ಚಂದ್ರಶೇಖರ್ ಕುಮಾರಸ್ವಾಮಿ ಮೇಲೆ ಸಲ್ಲದ ಮಾತುಗಳನ್ನಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕಂದಿಕೆರೆ ಡಿ. ಯಶೋಧರ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿರವರ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಎಂ. ಚಂದ್ರಶೇಖರರವರು ಎಸ್ಐಟಿಗೆ ಬರೆದಿರುವ ಪತ್ರದಲ್ಲಿ ಅಸಭ್ಯ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಂದಿಗಳ ಜತೆ ಗುದ್ದಾಡಬೇಡಿ, ಏಕೆಂದರೆ ಹಂದಿಗಳಂತೆ ನೀವು ಕೊಳಕಾಗುತ್ತೀರಿ ಎಂಬ ಶಬ್ದ ಬಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಡಿಜಿಪಿ ಚಂದ್ರಶೇಖರ್ ಸರ್ಕಾರದ ಕೆಲಸ ದುರುಪಯೋಗ ಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಅವಮಾನ ಮಾಡಿರುವ ಭ್ರಷ್ಟ ಅಧಿಕಾರಿಯನ್ನು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಉಪಾಧ್ಯಕ್ಷ ಮಠದ ಹಟ್ಟಿ ವೀರಣ್ಣ, ತಾಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್, ನಗರಸಭೆ ಸದಸ್ಯರಾದ ದೀಪು, ನಸರುಲ್ಲಾ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಅಬು ವೀರಭದ್ರಣ್ಣ, ಕರಿಬಸಪ್ಪ, ಮಂಜಣ್ಣ, ರುದ್ರಣ್ಣ, ಪ್ರತಿಭಟನೆ ನೇತೃತ್ವ ವಹಿಸಿದ್ದರು.