ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪರಿಸರ ಸಂರಕ್ಷಣೆಯ ಉದ್ದೇಶದಿಂದ 20 ಸಾವಿರ ಚದರಡಿಗಿಂತ ದೊಡ್ಡ ಕಡ್ಡಾಯದ ಛಾವಣಿ ವೇಲೆ ಸೋಲಾರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು,ರಾಜ್ಯ ಪರಿಸರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷನಾಗಿ ನೇಮಕವಾದ ಮೇಲೆ 20 ಸಾವಿರ ಚದರ ಅಡಿಗೂ ಹೆಚ್ಚಿರುವ ಕಟ್ಟಡದ ಛಾವಣೆಯಲ್ಲಿ ಕಡ್ಡಾಯವಾಗಿ ಸೋಲಾರ್ ಪ್ಯಾನಲ್ ಅಳವಡಿಸಿರಬೇಕು. ಗಣಿಗಾರಿಕೆ ಆದಲ್ಲಿ ಶೇ.33ರಷ್ಟು ಹಸಿರು ಗಿಡಮರ ಬೆಳೆಸಿರಬೇಕು, ಪ್ರತಿ ಅಪಾರ್ಟ್ ಮೆಂಟ್ ನಲ್ಲೂ ಇವಿ ಚಾರ್ಜರ್ ಹೊಂದಿರಬೇಕು. ಅವರ ಆದಾಯದಲ್ಲಿ ಶೇ.1ರಷ್ಟು ಸಿಇಆರ್ ನಿಧಿಗೆ ಮೀಸಲಿಡಬೇಕು. ಸರ್ಕಾರಿ ಶಾಲೆ, ಅಂಗನವಾಡಿ, ಸರ್ಕಾರಿ ಆಸ್ಪತ್ರೆಗಳಿಗೆ ಸೋಲಾರ್, ಕುಡಿವ ನೀರಿಗಾಗಿ, ಮಳೆ ನೀರು ಕೊಯ್ಲು ಸಿಇಆರ್ ನಲ್ಲಿ ಆದ್ಯತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
2006ರಲ್ಲಿ ಕೇಂದ್ರ ಪರಿಸರ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಪರಿಸರದ ಮೇಲಿನ ಒತ್ತಡ, ಹಾನಿ ಅಂದಾಜು ಮಾಡುವ ಉದ್ದೇಶದಿಂದ ಎಸ್‌ಇಎಸಿ ಸಮಿತಿ ರಚನೆ ಮಾಡಲಾಗಿದೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಹ ಯಾವುದೇ ಗಣಿಗಾರಿಕೆ ಅಥವಾ ಕಟ್ಟಡ ಮತ್ತಿತರೆ ನಿರ್ಮಾಣ ಕುರಿತ ಎನ್‌ಒಸಿ ಅರ್ಜಿಗಳನ್ನು ವಜಾ ಮಾಡುತ್ತೇವೆ. ಇದನ್ನೆಲ್ಲಾ ಕೇಂದ್ರ ಸರ್ಕಾರವೇ ಮಾನಿಟರ್ ಮಾಡುತ್ತದೆ ಎಂದರು.ಪೂರ್ವ ಪರಿಶೀಲನೆ ನಮ್ಮ ಕಚೇರಿಯಲ್ಲಿ ನಡೆಯುತ್ತದೆ. ನ್ಯೂನತೆ ಕಂಡು ಬಂದಲ್ಲಿ ಆನ್‌ಲೈನ್‌ನಲ್ಲೇ ಪರಿಶೀಲನೆ, ವಿಚಾರಣೆ ಮಾಡಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ತಜ್ಞರ ತಂಡವೇ ಇದೆ ಎಂದು ಹೇಳಿದರು.
ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ತಿಂಗಳಿಗೆ ಸಮಿತಿ ಮುಂದೆ ಸುಮಾರು 25 ರಿಂದ 100 ಅರ್ಜಿಗಳು ಬರುತ್ತವೆ. ತಿಂಗಳಲ್ಲಿ 2 ಸಭೆ ಮಾಡುತ್ತೇವೆ. ಕಾಯಿದೆ ಉಲ್ಲಂಘನೆಯ 80 ಅರ್ಜಿಗಳಿದ್ದು ಈಗಾಗಲೇ 30 ಅರ್ಜಿ ತಿರಸ್ಕರಿಸಿದ್ದೇವೆ. ಹೀಗಾಗಿ ನಮ್ಮ ಮೇಲೆಯೇ 4 ಕೇಸುಗಳು ಎನ್‌ಜಿಟಿ ಯಲ್ಲಿ ದಾಖಲಾಗಿವೆ ಎಂದರು.ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೆಐಎಡಿಬಿಗೆ ಕಡೂರಿನ ನಗದಿಯತ್ ಕಾವಲಿನಲ್ಲಿ ೪೦೦ ಎಕರೆ ಮಂಜೂರಾಗಿದ್ದು ಅಲ್ಲಿಂದ ನಮಗೆ ಪ್ರಸ್ತಾವನೆ ಬಂದಿದೆ. ತಾಲೂಕಿನ ಮಾಗಡಿ ಹತ್ತಿರ ಕೈಗಾರಿಕೆ ಸ್ಥಾಪನೆ ಬಗ್ಗೆ ಒಂದು ಪ್ರಸ್ತಾವನೆ ಸರಕಾರದ ಮುಮದೆ ಇದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಡಿ. ಚಂದ್ರೇಗೌಡ, ಕಾರ್ಯದರ್ಶಿ ಗೋಪಿ, ಖಜಾಂಚಿ ಪುನೀತ್ ಉಪಸ್ಥಿತರಿದ್ದರು.
ಕೋಟ್ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ ಮತ್ತಿತರೆ ನಿರ್ಮಾಣಗಳಿಗೆ ಕಾಯಿದೆ ಉಲ್ಲಂಘನೆ ಮಾಡಿ ಅನುಮತಿ ನೀಡಿಲ್ಲ, ನೀಡುವುದೂ ಇಲ್ಲ.
-ಎ.ಎನ್.ಮಹೇಶ್, ಅಧ್ಯಕ್ಷರು, ರಾಜ್ಯ ಪರಿಸರ ಮೌಲ್ಯ ಮಾಪನ ಸಮಿತಿ