ಸಾರಾಂಶ
- ಸಿಂಸೆಯಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಮರ ಶಿಲ್ಪಿ ಜಕಣಾಚಾರಿಯವರು ನಾಗರ ಶೈಲಿ, ದ್ರಾವಿಡ ಶೈಲಿ ಸೇರಿಸಿ ವೇಸರ ಶೈಲಿಯಲ್ಲಿ ಸೋಮನಾಥ ದೇವಸ್ಥಾನದ ಕೆತ್ತನೆ ಮಾಡಿದ್ದರು ಎಂದು ವಿಶ್ವಕರ್ಮ ಬ್ರಾಹ್ಮಣ ಸಮಾಜದ ಮುಖಂಡ ಉಡುಪಿಯ ನಟರಾಜ ಆಚಾರ್ಯ ತಿಳಿಸಿದರು.
ಸೋಮವಾರ ಸಿಂಸೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. 800 ವರ್ಷಗಳ ಹಿಂದೆ ಅಮರ ಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲಾ ಶಾಸ್ತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಸೋಮನಾಥ ದೇವಾಲಯ, ಬೇಲೂರು, ಹಳೇಬೀಡು ದೇವಸ್ಥಾನಗಳನ್ನು ಅವರು ಕೆತ್ತಿದ್ದರು. ಅವರಿಗೆ ವೃತ್ತಿ ಜೀವನವೇ ಉಸಿರಾಗಿತ್ತು. ಸೋಮನಾಥೇಶ್ವರ ದೇವಸ್ಥಾನ ತ್ರಿಕೂಟ ದೇವಸ್ಥಾನವಾಗಿದೆ. 3 ಗರ್ಭಗುಡಿ ಇದೆ. ಹೊಯ್ಸಳದಲ್ಲಿ ದ್ವಿಕುಟ ದೇವಸ್ಥಾನ, ಬೇಲೂರಿನಲ್ಲಿ ಚೆನ್ನಕೇಶವ ದೇವಸ್ಥಾನ ಕೆತ್ತಿದ್ದಾರೆ. , ಹಳೇಬೀಡು ದೇವಸ್ಥಾನ ಹೊರಗಡೆ ಶಿಲ್ಪಕಲೆ ಚೆಂದವಾಗಿದ್ದರೆ ಬೇಲೂರು ದೇಗುಲದ ಒಳಗಡೆ ಕೆತ್ತನೆ ಸುಂದರವಾಗಿದೆ. 800 ವರ್ಷಗಳ ಹಿಂದಿನ ತಂತ್ರಜ್ಞಾನ ಅದ್ಬುತವಾಗಿತ್ತು. ವಿಶ್ವಕರ್ಮರು ನಗರ , ಮನೆ ಹಾಗೂ ವ್ಯಕ್ತಿಯ ಸೌಂದರ್ಯ ಹೆಚ್ಚಿಸಲು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿದ್ದ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್ ಮಾತನಾಡಿ, ರಾಜ್ಯ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರು ಹೋರಾಟ ಮಾಡಿದ ಫಲವಾಗಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ, ವಿಶ್ವಕರ್ಮ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಇದರ ಜೊತೆಗೆ ಮುಜರಾಯಿ ದೇವಸ್ಥಾನ ಸಮಿತಿಯಲ್ಲಿ ವಿಶ್ವಕರ್ಮ ಸಮುದಾಯದವರಿಗೂ ಸದಸ್ಯತ್ವ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಪಿ.ಎಂ. ವಿಶ್ವಕರ್ಮ ಸಮ್ಮಾನ ಯೋಜನೆಯಡಿ 17 ಸಾವಿರ ಕೋಟಿ ರು. ಮಂಜೂರು ಮಾಡಿದ್ದಾರೆ. ಇದರಲ್ಲಿ 18 ಕುಲಕಸಬು ಗುರುತಿಸಲಾಗಿದೆ. ಈಗಾಗಲೇ ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲಿ 1 ಸಾವಿರ ಜನರ ನೋಂದಣಿಯಾಗಿದೆ. ವಿಶ್ವಕರ್ಮ ಬ್ರಾಹ್ಮಣ ಸಮುದಾಯ ದವರು ಯಾವುದೇ ಹಿಂಜರಿಕೆ, ಕೀಳಿರಿಮೆ ಮಾಡಿಕೊಳ್ಳದೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು. ಬೇಲೂರಿನಲ್ಲಿ ಅಮರ ಶಿಲ್ಪಿ ಜಕಣಾಚಾರಿ ವಿಗ್ರಹ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ತಹಸೀಲ್ದಾರ್ ತನುಜ ಟಿ.ಸವದತ್ತಿ ಉದ್ಘಾಟಿಸಿದರು. ಸಭೆ ಅಧ್ಯಕ್ಷತೆಯನ್ನು ತಾಲೂಕು ವಿಶ್ವಕರ್ಮ ಬ್ರಾಹ್ಮ ಣ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಜೇಶ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ, ತಾಲೂಕು ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ,ಎಪಿಎಂಸಿ. ನಿರ್ದೇಶಕ ಎಚ್.ಎಂ.ಶಿವಣ್ಣ ಇದ್ದರು. ಇದಕ್ಕೂ ಮೊದಲು ಅತಿಥಿಗಳು ಅಮರ ಶಿಲ್ಪಿ ಜಕಣಾಚಾರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಭಾರತಿ ಅರವಿಂದ ಆಚಾರ್ ಸ್ವಾಗತಿಸಿದರು. ಅರುಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.