ಅಂಗವಿಕಲರ ಸ್ವಾವಲಂಬನೆಗೆ ಪೂರಕ ಯೋಜನೆ ತನ್ನಿ

| Published : Jan 02 2024, 02:15 AM IST

ಸಾರಾಂಶ

ಇಂದು ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಂತೆ ಅಂಗವಿಕಲರ ಮಾಸಾಶನ ಹಾಗೂ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಗೌರವಧನ ಹೆಚ್ಚಿಸಬೇಕಿದೆ.

ಹೂವಿನಹಡಗಲಿ: ಎಲ್ಲರಂತೆ ಅಂಗವಿಕಲರು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಲು ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತರಬೇಕು. ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.

ಇಲ್ಲಿನ ರಂಗಭಾರತಿ ರಂಗಮಂದಿರದಲ್ಲಿ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ದೈನಂದಿನ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಂತೆ ಅಂಗವಿಕಲರ ಮಾಸಾಶನ ಹಾಗೂ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು ಗೌರವಧನ ಹೆಚ್ಚಿಸಬೇಕಿದೆ. ಮುಂದಿನ ಅಧಿವೇಶನದಲ್ಲಿ ಅಂಗವಿಕಲರ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುತ್ತೇನೆ. ಜತೆಗೆ ಆರೋಗ್ಯ ತಪಾಸಣೆಗೆ ಬರುವ ಅಂಗವಿಕಲರ ಅನುಕೂಲಕ್ಕಾಗಿ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಎರಡು ಗಾಲಿಕುರ್ಚಿ ಖರೀದಿಸಲು ಅನುದಾನ ಮಂಜೂರು ಮಾಡಿದ್ದೇನೆಂದು ಹೇಳಿದರು.

ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾ ವಿಜಯ್ ಮಾತನಾಡಿ, ಅಂಗವಿಕಲರು ಸರ್ಕಾರದ ಮಾಸಾಶನದ ಮೇಲೆ ಅವಲಂಬಿತರಾಗಬಾರದು. ಮಾಸಾಶನದಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಅಗತ್ಯವಿದೆ. ಅವರಿಗಾಗಿ ಆದಾಯ ಚಟುವಟಿಕೆ ಕೈಗೊಳ್ಳುವ ಯೋಜನೆ ರೂಪಿಸಬೇಕಿದೆ. ಪಟ್ಟಣದಲ್ಲಿ ಅಂಗವಿಕಲರಿರ ಭವನದ ಅಗತ್ಯವಿದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೃಷ್ಣಸಾ ಬಾಕಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ, ಸಿಡಿಪಿಒ ರಾಮನಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ನಿಂಗಪ್ಪ, ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಎಸ್. ಚಂದ್ರಪ್ಪ, ಬಿ. ಮಂಜುನಾಥ, ಎನ್.ಎಂ. ಕೊಟ್ರೇಶ, ನಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಂಧ ಗಾಯಕಿ ಪಾರಿ ಕಾವ್ಯ ಅವರಿಗೆ ಹಡಗಲಿ ಗಾನ ಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಶಂಕರ್ ಬೆಟಗೇರಿ ಉಪನ್ಯಾಸ ನೀಡಿದರು. ಚಂದನ ಕಲಾ ಬಳಗದ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಧಾರವಾಡದ ಖ್ಯಾತ ಗಾಯಕ ಮೆಹಬೂಬ್ ಸಾಬ್, ಇಟ್ಟಿಗಿಯ ಸೋಮಶೇಖರ ಗವಾಯಿ, ಸ್ಥಳೀಯ ಪ್ರತಿಭೆಗಳಾದ ಕಾವ್ಯ ಪಾರಿ, ಸೃಷ್ಟಿ ಗಾನಸುಧೆ ಹರಿಸಿದರು. ಹರಪನಹಳ್ಳಿಯ ಸಾಗರ್, ತಿಮ್ಮಣ್ಣ ಅದ್ಭುತವಾಗಿ ತಬಲಾ, ಕೀಪ್ಯಾಡ್ ನುಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.