ಲೌಕಿಕದಂತೆ ಆಧ್ಯಾತ್ಮಿಕ ಶಿಕ್ಷಣವೂ ಅಗತ್ಯ: ಪುತ್ತಿಗೆ ಶ್ರೀ

| Published : Jan 02 2024, 02:15 AM IST

ಲೌಕಿಕದಂತೆ ಆಧ್ಯಾತ್ಮಿಕ ಶಿಕ್ಷಣವೂ ಅಗತ್ಯ: ಪುತ್ತಿಗೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ನೆನಪಿಗಾಗಿ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ನಿರ್ಮಿಸಲಾದ ಸುವರ್ಣ ಸ್ಮೃತಿಸೌಧ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜೀವನದಲ್ಲಿ ಲೌಕಿಕ ವಿದ್ಯೆ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವೂ ಅತ್ಯಗತ್ಯ ಎಂದು ಭಾವಿ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

ತಮ್ಮ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ನೆನಪಿಗಾಗಿ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ನಿರ್ಮಿಸಲಾದ ಸುವರ್ಣ ಸ್ಮೃತಿಸೌಧ ಉದ್ಘಾಟನೆ ಸಂದರ್ಭ ಭಾನುವಾರ ಮಾತನಾಡಿದರು.

ಪುತ್ತಿಗೆ ವಿದ್ಯಾಪೀಠದಲ್ಲಿ ಎಂಜಿನಿಯರಿಂಗ್ ಕಾಲೇಜು ಮಾಡಲು ಯೋಚಿಸಿದ್ದಾಗ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸಲಹೆಯಂತೆ ಆಧ್ಯಾತ್ಮಿಕ ಶಿಕ್ಷಣಕ್ಕೆ ಒತ್ತು ನೀಡಲಾಯಿತು. 10 ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗಿಂತ ಒಂದು ವಿದ್ಯಾಪೀಠ ಸ್ಥಾಪನೆ ಉತ್ತಮ. ಆಧ್ಯಾತ್ಮ ವಿದ್ಯೆ ಶ್ರೇಷ್ಠವಾಗಿದ್ದು, ಲೌಕಿಕ ವಿದ್ಯೆ ಜೊತೆಗೆ ಆಧ್ಯಾತ್ಮ ವಿದ್ಯೆಯ ಅಭ್ಯಾಸ ಅಗತ್ಯ ಎಂದರು.

ತಮ್ಮ ಸನ್ಯಾಸ ಸ್ವೀಕಾರದ ಸ್ಮರಣೆಗಾಗಿ ಬ್ರಾಹ್ಮಣ್ಯ ರಕ್ಷಣೆಗಾಗಿ ಕಾರಕ್ರಮ ಹಾಗೂ ಶ್ರೀಕೃಷ್ಣ ಸುವರ್ಣ ರಥ ಸಮರ್ಪಣೆಯ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು.

ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸುವರ್ಣ ಸ್ಮೃತಿಸೌಧ ಉದ್ಘಾಟಿಸಿ, ಪುತ್ತಿಗೆ ಶ್ರೀಪಾದರು ವಿದೇಶದಲ್ಲಿ ಕೈಗೊಂಡಿರುವ ಕೃಷ್ಣ ತತ್ವ ಪ್ರಚಾರ ಶ್ಲಾಘನೀಯ. ತಮ್ಮ ಚತುರ್ಥ ಪರಾಯ ಅವಧಿಯಲ್ಲಿ ಕೋಟಿ ಗೀತಾ ಲೇಖನ ಕಾರ್‍ಯದಂಥ ಮಹಾಕಾರ್‍ಯ ನಡೆಸುತ್ತಿರುವುದು ಹರ್ಷದಾಯಕ ಎಂದರು.

ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಮೂ.ಪಿ.ಎಸ್.ದಿನೇಶಕುಮಾರ್ ಶುಭ ಕೋರಿದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ವಾಂಸ ಬೆಂಗಳೂರಿನ ಚತುರ್ವೇದಿ ವೇದವ್ಯಾಸಾಚಾರ್, ಕಾಸರಗೋಡಿನ ರವೀಶ್ ತಂತ್ರಿ ಕುಂಟಾರು, ಮಂಗಳೂರು ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಪುತ್ತೂರಿನ ಡಾ.ಪಿ.ಜೆ. ಬಾಲಕೃಷ್ಣ ಮೂಡಂಬಡಿತ್ತಾಯ, ಉಜಿರೆಯ ಡಾ.ದಯಾಕರ್, ಅ.ಕ. ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬೆಂಗಳೂರಿನ ಬಿ.ಎಸ್. ರಾಘವೇಂದ್ರ ಭಟ್, ಅಮೆರಿಕದ ದಂಡತೀರ್ಥ ಸೀತಾರಾಮ ಭಟ್, ಸಾರಿಗೆ ಉದ್ಯಮಿ ಕೃಷ್ಣಾನಂದ ಚಾತ್ರ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ನಿವೃತ್ತ ಪ್ರಾಂಶುಪಾಲ ಡಾ.ಮಧುಸೂದನ ಭಟ್ ಅತಿಥಿಗಳಾಗಿದ್ದರು.