ಸಾರಾಂಶ
ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಕೊಂಡಾಕುಳಿಯಲ್ಲಿ ಮಾಂಸಕ್ಕಾಗಿ ಗರ್ಭ ಧರಿಸಿದ್ದ ಗೋವಿನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.ನಂತರ ಘಟನಾ ಸ್ಥಳ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಕೊಂಡಾಕುಳಿಯಲ್ಲಿ ಹೀನಕೃತ್ಯ ನಡೆದಿದೆ. ಮೇಲ್ನೋಟಕ್ಕೆ ಗೋವಿನ ಹತ್ಯೆ ನಡೆದಿರುವುದು ಕಂಡುಬಂದ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಪತ್ತೆ ಹಚ್ಚಲು ಹೊನ್ನಾವರ, ಕುಮಟಾ, ಮುರ್ಡೇಶ್ವರ ಸಬ್ ಇನ್ಸ್‌ಪೆಕ್ಟರ್, ಭಟ್ಕಳ ಡಿವೈಎಸ್ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದೇವೆ. ಶಂಕಿತ ಐದು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಡಿವೈಎಸ್ಪಿ ಮಹೇಶ್, ಸಿಪಿಐ ಸಿದ್ದರಾಮೇಶ್ವರ, ಇಲಾಖೆ ಸಿಬ್ಬಂದಿ ಇದ್ದರು.ಹೊನ್ನಾವರ ಗೋಹತ್ಯೆ ತನಿಖೆಗೆ 6 ತಂಡಕಾರವಾರ: ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಇತ್ತೀಚೆಗೆ ಗೋವು ವಧೆಗೆ ಸಂಬಂಧಿಸಿದಂತೆ ಆರೋಪಿತರ ಪತ್ತೆಗೆ ಪ್ರತ್ಯೇಕ ೬ ತಂಡಗಳನ್ನು ರಚನೆ ಮಾಡಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿತರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ನಡೆಸಿದವರ ವಿರುದ್ಧ ಒಟ್ಟೂ ೧೩೮ ಪ್ರಕರಣಗಳನ್ನು ದಾಖಲಿಸಿ ೮೬೬ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಅದೇ ರೀತಿ ಕಳೆದ ಐದು ವರ್ಷಗಳಲ್ಲಿ ಗೋವುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೨೩ ಪ್ರಕರಣಗಳು ದಾಖಲಿಸಿ ೩೪ ಗೋವುಗಳ ರಕ್ಷಿಸಲಾಗಿದೆ.ಜಿಲ್ಲಾದ್ಯಂತ ಅಕ್ರಮ ಗೋವು ಸಾಗಾಟ ಮತ್ತು ಗೋವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಒಟ್ಟೂ ೪೬೭ ಆರೋಪಿತರನ್ನು ವಶಕ್ಕೆ ಪಡೆದು ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ. ಅಲ್ಲದೇ ಅಕ್ರಮ ಗೋವುಗಳ ಸಾಗಾಟ ಮತ್ತು ಗೋವು ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಗಸ್ತುಗಳನ್ನು ಹೆಚ್ಚಿಸಿ ಚೆಕ್‌ಪೋಸ್ಟ್‌ಗಳನ್ನು ತೆರೆದು ನಿಗಾ ವಹಿಸಲಾಗಿದೆ.ಸಾರ್ವಜನಿಕರು ಅಕ್ರಮ ಗೋವು ಸಾಗಾಟ ಮತ್ತು ಗೋಹತ್ಯೆಯ ಕುರಿತಂತೆ ಮೊ. ೯೪೮೦೮೦೫೨೦೧ ಸಂಪರ್ಕಿಸಿ ಮಾಹಿತಿ ನೀಡಬಹುದು. ಯಾವುದೇ ಮಾಹಿತಿಯನ್ನು ಗೌಪ್ಯವಾಗಿರಿಸಿ ಪೊಲೀಸ್ ಕಾರ್ಯಾಚರಣೆ ನಡೆಸಿ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಗೋವು ಹಂತಕರ ವಿರುದ್ಧ ಕ್ರಮ ಕೈಗೊಳ್ಳಿ: ನಾಗರಾಜ ನಾಯಕಕಾರವಾರ: ಗರ್ಭ ಧರಿಸಿದ ಗೋವನ್ನು ಅಮಾನುಷವಾಗಿ ಕೊಂದು ಕರುವನ್ನು ಹೊರತೆಗೆದು ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಗೋ ಮಾತೆಯನ್ನು ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು. ಭಾರತೀಯ ಕಾನೂನಿನಲ್ಲೂ ಅವಕಾಶವಿದೆ. ಒಂದು ವೇಳೆ ಪೊಲೀಸ್ ಇಲಾಖೆ ಗೋವಿನ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ವಹಿಸದೇ ಇದ್ದರೆ ನಾವೇ ರಕ್ಷಿಸಿಕೊಳ್ಳುತ್ತೇವೆ ಎಂದು ನ್ಯಾಯವಾದಿ ನಾಗರಾಜ ನಾಯಕ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋವಿನ ಕೆಚ್ಚಲು ಕತ್ತರಿಸುವುದು, ಅವುಗಳನ್ನು ಹತ್ಯೆ ಮಾಡುವುದು ಜನರನ್ನು ಭಯಪಡಿಸಲು, ವಿದೇಶಿ ಸಂಸ್ಕೃತಿ ಹೇರಲು ಪ್ರಯತ್ನ ಮಾಡಿದಂತೆ ಭಾಸವಾಗುತ್ತಿದೆ. ಅಂತಹ ಸಂಸ್ಕೃತಿ ಹೇರಲು ಬಿಡುವುದಿಲ್ಲ. ಸನಾತನ ಧರ್ಮದಲ್ಲಿ ಗೋವನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡುತ್ತಾರೆ. ಅದನ್ನು ಒಪ್ಪಿಕೊಂಡು ನಡೆಯುತ್ತಿದ್ದೇವೆ. ಅದರಲ್ಲೇ ಮುನ್ನಡೆಯುತ್ತದೆ. ನಮ್ಮ ಗೋಮಾತೆಯ್ನು ರಕ್ಷಿಸಿಕೊಳ್ಳುವುದು ನಮ್ಮ ಜನ್ಮಸಿದ್ಧ ಹಕ್ಕಾಗಿದೆ. ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))