ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ವಿಶೇಷ ಸಭೆ ನಗರದ ಪೂಗಭವನದಲ್ಲಿ ನಡೆಯಿತು.
ವಿವಿಧ ಸಮಿತಿಗಳ ರಚನೆ । ಶಿರಸಿಯಲ್ಲಿ ಜ. 11ರಂದು ಬೃಹತ್ ಸಮಾವೇಶ
ಕನ್ನಡಪ್ರಭ ವಾರ್ತೆ ಶಿರಸಿಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ವಿಶೇಷ ಸಭೆ ನಗರದ ಪೂಗಭವನದಲ್ಲಿ ನಡೆಯಿತು.
ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶಿರಸಿ ನಗರ ಹಾಗೂ 3 ತಾಲೂಕುಗಳ ಸಮಿತಿಯ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ತನು-ಮನ-ಧನ-ಜನರ ಜೊತೆ ಬೇಡ್ತಿ ಅಘನಾಶಿನಿ ಬೃಹತ್ ಜನಸಮಾವೇಶ ಯಶಸ್ವಿಗೊಳಿಸಲು ಕರೆನೀಡಿದರು.ಮಠಾಧೀಶರು, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ, ಜನಪ್ರತಿನಿಧಿಗಳು, ಗಣ್ಯರು ತಜ್ಞರ ಪಾಲ್ಗೊಳ್ಳುವಿಕೆಯ ಸಮಾವೇಶದ ವ್ಯಾಪಕ ವ್ಯವಸ್ಥೆಗೆ ಶಿರಸಿ ನಗರದ ಗಣ್ಯರ ಸಂಚಲನಾ ಸಮಿತಿ ರಚಿಸಲಾಯಿತು.
ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, ಅಘನಾಶಿನಿ-ಬೇಡ್ತಿ-ಶಾಲ್ಮಲಾ-ಪಟ್ಟಣದ ಹೊಳೆ ಕಣಿವೆ ಉಳಿಸಿ ಚಳುವಳಿ ನಾಡಿನ ಎಲ್ಲೆಡೆ ಗಮನ ಸೆಳೆದಿದೆ. ಇದೀಗ ಜ. 11ರಂದು ನಡೆಯುವ ಸಮಾವೇಶದ ಧ್ವನಿ ದೆಹಲಿಗೂ ಕೇಳಿಸುವಂತೆ ಬೃಹತ್ ಜಾಗೃತಿ ಅಭಿಯಾನ ನಡೆಸಬೇಕು ಎಂದು ಕಣಿವೆಗಳ ಜನತೆಗೆ ಮನವಿ ಮಾಡಿದರು.ಶಿರಸಿ ಹಾಗೂ ಸುತ್ತಲಿನ ಮಹಿಳಾ ಸಂಘ-ಸಂಸ್ಥೆಗಳ ಸಭೆಯನ್ನು ನಡೆಸಿ ಮನೆ ಮನೆಗೆ ಸಂದೇಶ ತಲುಪಿಸುತ್ತೇವೆ ಎಂದು ಸಮಿತಿಯ ಮಧುಮತಿ, ಭಾರತಿ, ಗೀತಾ, ಶೈಲಜಾ ತಿಳಿಸಿದರು. ವಿವಿಧ ಜಾತಿ-ಸಮುದಾಯಗಳ ಪ್ರಮುಖರ ಸಭೆಯನ್ನು ಡಿ. 27ರಂದು ಏರ್ಪಡಿಸಲು ನಿರ್ಧರಿಸಲಾಯಿತು. ಈ ಕುರಿತು ಶ್ರೀಧರ ಹಿರೇಹದ್ದ ಹರೀಶ ಪಂಡಿತ್, ಸುಧೀರ ಭಟ್, ಅರುಣ್ ಪ್ರಭು ಮುಂತಾದವರು ಜವಾಬ್ದಾರಿ ತೆಗೆದುಕೊಂಡರು. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸಹಕಾರ ಸಂಸ್ಥೆಗಳ ಬೆಂಬಲ ಪ್ರಕಟಿಸಿದರು.
ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಡಿ.29ರಂದು ಸಿದ್ಧಾಪುರದಲ್ಲಿ ಎಲ್ಲ ಸಹಕಾರಿಗಳ ಸಭೆ ನಡೆಸಲಿದ್ದೇವೆ ಎಂದರು. ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೇರೂರು, ಹೆಗ್ಗರಣಿಯಲ್ಲಿ ತಯಾರಿ ಸಭೆಗಳು ನಡೆಯಲಿವೆ ಎಂದರು. ಗ್ರಾಮೀಣ ಪ್ರದೇಶದ ಮನೆ ಮನೆಗೆ ಕರಪತ್ರ ವಿತರಣೆ ಮಾಡಲಿದ್ದೇವೆ ಎಂದು ಗೋಪಾಲ ಕೃಷ್ಣ ತಂಗಾರಮನೆ ತಿಳಿಸಿದರು. ರತ್ನಾಕರ ಬಾಡಲಕೊಪ್ಪ ವಿವಿಧ ಧಾರ್ಮಿಕ ಮುಖಂಡರ ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.ಕುಮಟಾದಲ್ಲಿ ಜ. 1ರಂದು ಅಘನಾಶಿನಿ ಜಾಗೃತಿ ಸಭೆ ನಡೆಸುವ ವಿಷಯವನ್ನು ಬಾಲಚಂದ್ರ ಸಾಯಿಮನೆ ಪ್ರಕಟಿಸಿದರು. ಅಂಕೋಲಾ ತಾಲೂಕಿನ ಕಲ್ಲೇಶ್ವರದಲ್ಲಿ ಸಭೆ ನಡೆಸುವ ಸಂಗತಿಯನ್ನು ನರಸಿಂಹ ಸಾತೊಡ್ಡಿ ತಿಳಿಸಿದರು. ಎಸಿ ಕಚೇರಿ, ಅರಣ್ಯ ಕಚೇರಿಗೆ ಸದ್ಯದಲ್ಲೆ ಬೇಡ್ತಿ ನಿಯೋಗ ಭೇಟಿ ನೀಡಲಿದೆ ಎಂದು ಎನ್.ಎಸ್. ಭಟ್ ಎಫ್ಡಿ ಮಠ ತಿಳಿಸಿದರು. ಡಾ. ಕೇಶವ ಕೊರ್ಸೆ, ಸುರೇಶ ಹಕ್ಕಿಮನೆ ತಂಡ ಸಾಮಾಜಿಕ ಮಾಧ್ಯಮದ ಮೂಲಕ ಬೇಡ್ತಿ-ಅಘನಾಶಿನಿ ಜಾಗೃತಿ ಮಾಡಲು ಜವಾಬ್ದಾರಿ ನೀಡಲಾಯಿತು. ವಿಶ್ವೇಶ್ವರ ಭಟ್, ವೆಂಕಟೇಶ ನಾಯ್ಕ, ಶ್ರೀನಿವಾಸ್ ಹೆಬ್ಬಾರ್, ವಿಶ್ವನಾಥ ಶೀಗೇಹಳ್ಳಿ, ಅನಂತಮೂರ್ತಿ ಹೆಗಡೆ, ಉಪೇಂದ್ರ ಪೈ ಮುಂತಾದವರು ಸಂಚಾಲನಾ ಸಮಿತಿಯಲ್ಲಿ ಇದ್ದಾರೆ.
ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ಭಟ್ ಸ್ವರ್ಣವಲ್ಲೀ ಶ್ರೀಗಳನ್ನು ಸ್ವಾಗತಿಸಿದರು. ಶ್ಯಾಮಸುಂದರ ಭಟ್ ಪ್ರಾಸ್ತಾವಿಕ ಮಾಡಿದರು. ಲೋಕೇಶ್ ಹೆಗಡೆ ನಿರ್ವಹಿಸಿದರು. ಹುಳಗೋಳ ಅನಂತ ವಂದಿಸಿದರು.