ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲುಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಗೇರಿ ವಲಯ ವತಿಯಿಂದ ಮೇಕೇರಿ ಗೌರಿ ಶಂಕರ ದೇವಾಲಯದಲ್ಲಿ ಆಯೋಜಿಸಿದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 1500 ಹೊಸ ಸದಸ್ಯರ ಸೇರ್ಪಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗುತ್ತಿರುವ ಜನಪರ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಜನರು ಸದೃಢರಾಗಲು ಸಹಕಾರಿಯಾಗಿದೆ ಎಂದರು.

ಶ್ರೀ ಗೌರಿ ಶಂಕರ ದೇವಾಲಯದ ಕಾರ್‍ಯದರ್ಶಿ ಲೋಕೇಶ್ ಟಿ.ವಿ. ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ನಮ್ಮ ಕೊಡಗು ಬಹಳ ಪ್ರಸಿದ್ದವಾದುದು. ಇಲ್ಲಿಯ ಸಂಸ್ಕೃತಿ, ಪ್ರಕೃತಿ ವಿಶೇಷ. ಅಂತಹ ನಾಡಿನಲ್ಲಿ ನಾವಿದ್ದೇವೆ. ನಮ್ಮ ಬದುಕಿನ ಜತೆಗೆ ನಮ್ಮ ಊರಿನ ಸಂಸ್ಕೃತಿ ಯನ್ನು ನಮ್ಮ ಮಕ್ಕಳಿಗೆ ತಿಳಿಸಿ ಹೇಳುವ ಅಗತ್ಯವಿದೆ. ಧರ್ಮದಿಂದ ಕೊಡಿದ ಪ್ರಗತಿ ಮಾತ್ರ ಶಾಶ್ವತವಾಗಿರುತ್ತದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬೆಳ್ಯನ ಚಂದ್ರಪ್ರಕಾಶ ಯೋಜನೆಯಲ್ಲಿ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತಿಳಿಸಿದರು.

ಶ್ರೀ ಗೌರಿ ಶಂಕರ ದೇವಾಲಯದ ಅಧ್ಯಕ್ಷ ಕೆ.ಕೆ ಪೂರ್ಣಯ್ಯ, ಉಪಾಧ್ಯಕ್ಷ ಕೆ.ಆರ್. ಬೆಳ್ಯಪ್ಪ, ಮೇಕೇರಿ ಗ್ರಾಪಂ ಸದಸ್ಯರಾದ ಹನೀಫ್, ಸುಶೀಲ, ಪ್ರಗತಿ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ, ಗಣೇಶ ಸೇವಾ ಸಮಿತಿ ಗೌರವಾಧ್ಯಕ್ಷ ಕುಮಾರ್ ಟಿ. , ಸ್ವಾಗತ್ ಯುವಕ ಸಂಘದ ಅಧ್ಯಕ್ಷ ಉಮೇಶ್ ಟಿ., ಬಂಧು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷ ನಳಿನಿ ಎನ್., ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ ಎನ್. ಸ್ವಾಗತಿಸಿದರು. ಮೇಲ್ವಿಚಾರಕಿ ವಿನೋದ ನಿರೂಪಿಸಿ, ಮೇಲ್ವಿಚಾರಕಿ ವಿದ್ಯಾ ವಂದಿಸಿದರು.