ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶಿಕ್ಷಣ, ಆರೋಗ್ಯ, ನೀರಾವರಿಗೆ ವಿಶೇಷ ಆದ್ಯತೆ ನೀಡಿ ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ದೇವಿಪುರ ಗ್ರಾಮದಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಚೌಡಿ ಕಟ್ಟೆ ವೀಕ್ಷಿಸಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಆಧುನೀಕ ತಂತ್ರಜ್ಞಾನ ಅಳವಡಿಸಿದ ಪರಿಣಾಮ ಖಾಸಗಿ ಮಕ್ಕಳಿಗೂ ಮೀಗಿಲಾಗಿ ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತಾಗಿದೆ. ಎಂಜಿನಿಯರ್ ಕೊರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಪದವಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ ಎಂದರು.

ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ, ಸ್ವಚ್ಛತೆ ಹಾಗೂ ರೋಗಿಯ ಹಾರೈಕೆಯಲ್ಲಿಯೂ ಸುಧಾರಣೆ ಕಂಡಿದೆ. ಹೆರಿಗೆ, ಮೂಳೆ, ಕಿವಿ, ಮೂಗು ಹಾಗೂ ಗಂಟಲು, ಕಣ್ಣು ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆಗಳು ಆಸ್ಪತ್ರೆಯಲ್ಲಿಯೇ ನಡೆಯುತ್ತವೆ. ನೂರಕ್ಕೂ ಹೆಚ್ಚು ರಕ್ತ ಪರೀಕ್ಷೆಗಳನ್ನು ಮಾಡಿಸಬಹುದಾಗಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು.

ಕಿರುಗಾವಲು ಮತ್ತು ಕಸಬ ಹೋಬಳಿ ರೈತರ ಕೃಷಿಗೆ ಅನುಕೂಲವಾಗುವಂತೆ ನಾಲಾ ಆಧುನೀಕರಣಗೊಳಿಸಲಾಗಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕಾವೇರಿ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ.ಇನ್ನೂ ಹೆಚ್ಚಿನ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.


ಚೌಡಿ ಕಟ್ಟೆಯ ಮುಂದುವರೆದ ಅಭಿವೃದ್ಧಿ ಜೊತೆಗೆ ಕಟ್ಟೆಯೊಳಗೆ ನಿರ್ಮಿಸುತ್ತಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಅನುದಾನ ನೀಡಬೇಕೆಂದು ದೇವಿಪುರ ಗ್ರಾಮದ ಮುಖಂಡರು ಮನವಿ ಮಾನವಿ ಮಾಡಿದರು.

ದೇವಸ್ಥಾನವನ್ನು ಗ್ರಾಮದವರು ಅಭಿವೃದ್ಧಿ ಪಡಿಸಿಕೊಳ್ಳಲಿ, ಸಿಎಸ್‌ಆರ್ ಅನುದಾನದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಭರವಸೆ ನೀಡಿದರು.

ಇದೇ ವೇಳೆ ಮನ್‌ಮನ್ ನಿರ್ದೇಶಕ ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ದೇವರಾಜ್, ಮುಖಂಡರಾದ ಬಂಕ್‌ಮಹದೇವು, ಸೋಮಶೇಖರ್, ನಂಜಮ್ಮಣಿ, ಚೌಡಪ್ಪ, ಬಸವರಾಜು ಸೇರಿದಂತೆ ಇತರರು ಇದ್ದರು.