ಮಹಾ ಮಂಡಳದಿoದ ಗಣೇಶ ಮೂರ್ತಿ ವಿಸರ್ಜನಾ ಬಾವಿಗೆ ವಿಶೇಷ ಪೂಜೆ

| Published : Sep 06 2024, 01:01 AM IST

ಮಹಾ ಮಂಡಳದಿoದ ಗಣೇಶ ಮೂರ್ತಿ ವಿಸರ್ಜನಾ ಬಾವಿಗೆ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಬಾವಿಗೆ ವಿಶೇಷ ಪೂಜಾ, ಹೋಮ, ಹವನ ಸಮಾರಂಭ ಜರುಗಿತು.

ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಆಶ್ರಯದಲ್ಲಿ ಗುರುವಾರ ಇಲ್ಲಿನ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಬಾವಿಗೆ ವಿಶೇಷ ಪೂಜಾ, ಹೋಮ, ಹವನ ಸಮಾರಂಭ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿತು.

ಈ ವೇಳೆ ಮಾತನಾಡಿದ ಶ್ರೀಗಳು, ದೇವರು ಕೊಟ್ಟ ನೀರಿನ ಪಾವಿತ್ರತೆ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ. ಗಂಗಾ ಶುದ್ಧೀಕರಣಕ್ಕಾಗಿ ಪೂಜೆ, ಹೋಮ, ಹವನ, ಮಂತ್ರ ಘೋಷಣೆಯಿಂದ ಸಾಧ್ಯ. ಗಂಗಾ ಮಾತೆಯ ಪೂಜೆ ಶುದ್ಧೀಕರಣಕ್ಕಾಗಿ ಅಗ್ನಿ ಸಾಕ್ಷಿಯಾಗಿದೆ. ದುಷ್ಠ ಶಕ್ತಿಗಳನ್ನೆಲ್ಲ ನಾಶ ಮಾಡಿ ಬದುಕಲು ಮತ್ತು ಪಾವಿತ್ರತೆ ಹೆಚ್ಚಿಸಲು ಅಗ್ನಿ ಒಂದು ದೊಡ್ಡ ಶಕ್ತಿಯಾಗಿದೆ.

ಜೀವನ ನಡೆಸಲು ಯಾರು ಸಹಾಯ ಕಲ್ಪಿಸುತ್ತಾರೆ ಅವರನ್ನು ನಾವು ಕೃತಜ್ಞತೆಯಿoದ ಕಾಣಬೇಕು. ಹಾಗೆ ದೇವರು ನಮಗೆ ಜೀವನ ನಡೆಸಲು ಗಾಳಿ, ಬೆಳಕು, ನೀರು, ಭೂಮಿ ಹೀಗೆ ಹಲವಾರು ರೀತಿಯಿಂದ ನಾವು ಬದುಕಲು ಕಲ್ಪಿಸಿಕೊಟ್ಟಿದ್ದಾನೆ. ಆದ್ದರಿಂದ ಆ ಭಗವಂತನನ್ನು ಸದಾ ಪೂಜಿಸುವುದು ನಮ್ಮ ಧರ್ಮವಾಗಬೇಕು ಎಂದರು.

ನೀಲಕಂಠಸ್ವಾಮಿ ಹಿರೇಮಠ ಹಾಗೂ ಹರಗುರು ಚರಮೂರ್ತಿಗಳಿಂದ ಪೂಜಾ ಸಮಾರಂಭ ಜರಗಿತು. ಭಕ್ತರು ಭಾವಿಗೆ ವಿಶೇಷ ಪೂಜೆ ಸಲ್ಲಿಸಿ ಗಂಗಾ, ಕಾವೇರಿ, ತುಂಗಾಭದ್ರಾ, ಮಲಪ್ರಭಾ, ನೇತ್ರಾವತಿ ನದಿಗಳಿಂದ ತಂದ ತೀರ್ಥಗಳನ್ನು ಬಾವಿಗೆ ಅರ್ಪಿಸಿ ಗಣೇಶ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಅಮರೇಶ ಹಿಪ್ಪರಗಿ, ಎಸ್‌.ಎಸ್‌. ಕಮಡೊಳ್ಳಿಶೆಟ್ಟರ್, ಅನಿಲ ಕವಿಶೆಟ್ಟಿ, ಸಂತೋಷ ಕಾಟವೆ, ಅನಿಲ ಬೇವಿನಕಟ್ಟಿ, ಗುರುನಾಥ ಪತ್ತಾರ, ಸಚಿನ ಕಂಗಳೆಕರ, ಐ.ಎಛ್‌. ನಾಯ್ಕರ, ಎಂ.ಎಂ. ಡಂಬಳ, ಸರಸ್ವತಿ ಮೆಹರವಾಡೆ, ಸಂಗೀತಾ ಜಡಿ, ಅಕ್ಕಮ್ಮ ಕಂಬಳಿ ಸೇರಿದಂತೆ ಹಲವರಿದ್ದರು. ನಾಳೆಯಿಂದ ಈದ್ಗಾ ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಸೆ. 7 ರಿಂದ 9ರ ವರೆಗೆ ಅದ್ಧೂರಿ ಗಣೇಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಉತ್ಸವ ಮಹಾಮಂಡಳಿಯ ಅಧ್ಯಕ್ಷ ಸಂಜೀವ ಬಡಸ್ಕರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈ ಮೈದಾನದಲ್ಲಿ ಕಳೆದ 2 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಮೂರನೇ ವರ್ಷದ ಗಣೇಶೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಮೂರ್ತಿ ಪ್ರತಿಷ್ಠಾಪನೆ ಮುನ್ನಾ ದಿನವಾದ ಸೆ. 6ರಂದು ಮೈದಾನದಲ್ಲಿ ಬೆಳಗ್ಗೆ 9ರಿಂದ 10.15ಗಂಟೆಯೊಳಗಾಗಿ ಹಾಲಗಂಬ ಹಾಕಲಾಗುತ್ತದೆ. ಸೆ. 7ರಂದು ಬೆಳಗ್ಗೆ 8 ಗಂಟೆಗೆ ಮೂರುಸಾವಿರ ಮಠದಿಂದ ಪ್ರತಿಷ್ಠಾಪನಾ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ಮೂಲಕ ಮೈದಾನಕ್ಕೆ ತರಲಾಗುವುದು. 10.30ಕ್ಕೆ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ನಿತ್ಯ ಸಂಜೆ 6 ಗಂಟೆಗೆ ಮಹಾ ಆರತಿ ನಡೆಯುವುದು. 7 ಗಂಟೆಗೆ ವಾರಕರಿ ಸಂಪ್ರದಾಯದವರಿಂದ ಭಜನೆ, 8ಕ್ಕೆ ಗಂಗಾ ಆರತಿ ಜರುಗಲಿದೆ ಎಂದರು.

ಸೆ. 8ರಂದು ಬೆಳಗ್ಗೆ 6ಕ್ಕೆ ಪತಂಜಲಿ ಯೋಗ ಸಮಿತಿ ಸದಸ್ಯರಿಂದ ಯೋಗ ನಮಸ್ಕಾರ, 9ಕ್ಕೆ ಮಹಾಪೂಜೆ, 10.30ಕ್ಕೆ ಗಣಹೋಮ, ನಂತರದಿಂದ ಸಂಜೆ 4.30ರ ವರೆಗೆ ನಿರಂತರ ಭಜನೆ ಹಾಗೂ ರಾತ್ರಿ 7.45ಕ್ಕೆ ಸಂಘದ ಘೋಷ್ ವಾದನ ನಡೆಯುವುದು. ಸೆ. 9ರಂದು ಬೆಳಗ್ಗೆ 9ಕ್ಕೆ ಮಹಾ ಮಂಗಳಾರತಿ ಹಾಗೂ 9.30ಕ್ಕೆ ಸವಾಲ್, 11.45 ಗಂಟೆಗೆ ವಿಸರ್ಜನಾ ಮೆರವಣಿಗೆ ಆರಂಭಿಸಲಾಗುವುದು. ಸಂಜೆ 4.30ಗಂಟೆಯೊಳಗಾಗಿ ಇಂದಿರಾ ಗಾಜಿನ ಮನೆಯ ಹಿಂಭಾಗದಲ್ಲಿರುವ ಬಾವಿಯಲ್ಲಿ ಮೂರ್ತಿ ವಿಸರ್ಜಿಸಲಾಗುವುದು ಎಂದರು.

ಅವ್ಯವಹಾರ, ಅಕ್ರಮ ನಡೆದಿಲ್ಲ:

ಮಹಾಮಂಡಳದಿಂದ ಕಳೆದ 2 ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿರುವ ಗಣೇಶೋತ್ಸವದಲ್ಲಿ ಹಣಕಾಸಿನ ಅವ್ಯವಹಾರ ಆಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮ ನಡೆದಿಲ್ಲ. ಯಾರೇ, ಯಾವುದೇ ಸಂದರ್ಭದಲ್ಲಿ ಬಂದು ದಾಖಲೆಗಳನ್ನು ನೋಡಬಹುದಾಗಿದೆ ಎಂದರು.

ಮಹಾಮಂಡಳ ಗಣೇಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್‌.ವಿ. ಪ್ರಸಾದ ಮಾತನಾಡಿ, ಗಣೇಶ ಚತುರ್ಥಿಗೆ ನಾಲ್ಕು ದಿನಗಳ ಮೊದಲೇ ಅನುಮತಿ ನೀಡಿರುವುದರಿಂದ ಸಿದ್ಧತೆಗೆ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ. ಗಣೇಶೋತ್ಸವದಲ್ಲಿ ವಿವಿಧ ಸಮಾಜದ ಮುಖಂಡರು, ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದು, ಎಲ್ಲರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಳೆದ 2 ವರ್ಷಗಳಲ್ಲಿ ಮಂಡಳಿಯಲ್ಲಿ ಅವ್ಯವಹಾರವಾಗಿರುವ ಕುರಿತು ಕೆಲವರು ಆರೋಪಿಸಿರುವುದು ಶುದ್ಧ ಸುಳ್ಳು. ನಮ್ಮಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಈ ಬಾರಿ ಗಣೇಶೋತ್ಸವ ಕಾರ್ಯಕ್ರಮ ಮುಗಿದ ಒಂದೆರಡು ದಿನಗಳಲ್ಲಿ ಸಂಪೂರ್ಣ ಖರ್ಚು, ವೆಚ್ಚದ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ವೇಳೆ ಸ್ವಾಗತ ಸಮಿತಿಯ ಪೋಷಕ ಮಹದೇವ ಕರಮರಿ, ಸದಸ್ಯರಾದ ಲಿಂಗರಾಜ ಪಾಟೀಲ, ಸುಭಾಷಸಿಂಗ್ ಜಮಾದಾರ, ಶೇಷಗಿರಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.