ಸಾರಾಂಶ
ಬ್ರಾಹ್ಮಣ ಸಂಘಟನೆಯನ್ನು ಲೋಕಕ್ಕೆ ತೋರಿಸುವ ನಿಟ್ಟಿನಲ್ಲಿ, ಪ್ರಾಕೃತಿಕ ವಿಪ್ಲವಗಳ ರಕ್ಷೆಗಾಗಿ, ಲೋಕ ಕಲ್ಯಾಣಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ ಜಿಲ್ಲೆಯ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ಸಮಾಜವನ್ನು ಒಟ್ಟು ಸೇರಿಸಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಸಮಸ್ತ ಬ್ರಾಹ್ಮಣ ಸಂಘಟನೆಗಳ ಸಹಕಾರದೊಂದಿಗೆ ಕುಳಾಯಿ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ಶ್ರೀಪಾದರ ಮಾರ್ಗದರ್ಶನದಲ್ಲಿ ಕೋಟಿ ಗಾಯತ್ರಿ ಜಪ ಯಜ್ಞವನ್ನು ಅಕ್ಟೋಬರ್ 26, 27ರಂದು ಚಿತ್ರಾಪುರ ಮಠದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಹೇಳಿದ್ದಾರೆ.ಚಿತ್ರಾಪುರ ಮಠದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬ್ರಾಹ್ಮಣ ಸಂಘಟನೆಯನ್ನು ಲೋಕಕ್ಕೆ ತೋರಿಸುವ ನಿಟ್ಟಿನಲ್ಲಿ, ಪ್ರಾಕೃತಿಕ ವಿಪ್ಲವಗಳ ರಕ್ಷೆಗಾಗಿ, ಲೋಕ ಕಲ್ಯಾಣಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ ಜಿಲ್ಲೆಯ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ಸಮಾಜವನ್ನು ಒಟ್ಟು ಸೇರಿಸಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮಹೇಶ್ ಕಜೆ ಅವರು ಗಾಯತ್ರಿ ಯಜ್ಞದ ಬಗ್ಗೆ ಮಾಹಿತಿ ನೀಡಿದರು. ಶ್ರೀ ವಿದ್ಯೆಂದ್ರ ಶ್ರೀಪಾದರು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.ವಿದ್ವಾನ್ ಹರಿನಾರಾಯಣ ದಾಸ ಆಸ್ರಣ್ಣ ಕಟೀಲು ಮಾತನಾಡಿ, ಮಾನವನನ್ನು ಪ್ರಜ್ಞಾಶಕ್ತಿಯ ಪರಾಕಾಷ್ಠೆಗೆ ತಲುಪಿಸುವ ಸಾಧನವೇ ಗಾಯತ್ರಿ ಉಪಾಸನೆ. ಅದು ಮಾನವನ ಆಧ್ಯಾತ್ಮಿಕ ಅವನತ್ಯಕ್ಕೆ ಅಡ್ಡಿ ಆತಂಕವನ್ನುಂಟು ಮಾಡುವ ಜನ್ಮಜನ್ಮಾಂತರಗಳ ದುಷ್ಕೃತ್ಯ ಶೇಷವನ್ನು, ವಿಪರೀತ ತಾಮಸ ಶಕ್ತಿಗಳನ್ನು ಮೆಟ್ಟಿ ನಿಲ್ಲಬಲ್ಲ ಪ್ರಚಂಡ ಸಾತ್ವಿಕ ಶಕ್ತಿಯೂ ಹೌದು ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಪದಾಧಿಕಾರಿಗಳಾದ ಸೂರ್ಯನಾರಾಯಣ ಕಶೆಕೋಡಿ, ಪೊಳಲಿ ಗಿರಿಪ್ರಕಾಶ್ ತಂತ್ರಿ , ಕೃಷ್ಣ ಭಟ್ ಕದ್ರಿ ಜ್ಯೋತಿಷಿ ಶ್ರೀರಂಗ ಐತಾಳ್ ಕದ್ರಿ, ಸುಬ್ರಹ್ಮಣ್ಯ ಪ್ರಸಾದ್, ಉಮಾ ಸೋಮಯಾಜಿ, ಚೇತನಾ ದತ್ತಾತ್ರೇಯ, ಕಾತ್ಯಾಯಿನಿ ಸೀತಾರಾಮ್, ತಾಲೂಕು ಪದಾಧಿಕಾರಿಗಳು, ವೇದಮೂರ್ತಿ ಬಪ್ಪನಾಡು ಶ್ರೀಪತಿ ಉಪಾಧ್ಯಾಯ, ಕರ್ಗಿ ಶ್ರೀನಿವಾಸ ಆಚಾರ್, ಸುರೇಶ್ ರಾವ್ ಚಿತ್ರಾಪುರ, ಶೋಭಾ ಚಿತ್ರಾಪುರ ಮತ್ತಿತರರು ಇದ್ದರು.