ಮಲ್ಪೆ: ಇಲ್ಲಿನ ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗದ ಪ್ರಯುಕ್ತ ಮಲ್ಪೆ ಬೀಚ್ ನಲ್ಲಿ ಭಾನುವಾರ ಬೀಚ್ ಕ್ರೀಡೋತ್ಸವ ನಡೆಯಿತು. ಕ್ರೀಡೋತ್ಸವಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಚಾಲನೆ ನೀಡಿ, ಮಕ್ಕಳು ಮೊಬೈಲ್‌ನ್ನು ಪಕ್ಕಕ್ಕಿಟ್ಟು ಲಗೋರಿಯಂತಹ ಕ್ರೀಡಾ ಚಟುವಟಿಕೆಗಳಲ್ಲಿ‌ ಸಕ್ರಿಯವಾಗಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚುತ್ತದೆ. ಈ ಬಗ್ಗೆ ಹೆತ್ತವರು ಹೆಚ್ಚಿನ ಗಮನ ಹರಿಸಬೇಕು ಎಂದರು.

ಮಹಾರುದ್ರ ಯಾಗದ ಜೊತೆ ಕ್ರೀಡೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ, ಪ್ರೋತ್ಸಾಹ ಸದಾ ಇರಲಿದೆ ಎಂದರು. ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಕಲಿಸಬೇಕು. ಕರಾವಳಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಲಭಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸೋಮವಾರ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದೇವೆ. ಏಳೂವರೆ ಸಾವಿರ ಉದ್ಯೋಗ ಅವಕಾಶಗಳು ಲಭ್ಯವಿರಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿತಿರುವ ಮಕ್ಕಳಿಗೆ ಹೆಚ್ಚು‌ ಆದ್ಯತೆ ಸಿಗುವ ಉದ್ಯೋಗವನ್ನು ಕಲ್ಪಿಸುತ್ತಿದ್ದೇವೆ ಎಂದರು. ಕ್ರೀಡಾ ಸಮಿತಿ ಸಂಚಾಲಕ ಶಾನ್ ರಾಜ್ ಕೋಟ್ಯಾನ್, ಸಮಾಜ ಸೇವಕ ಪಾಡುರಂಗ ಮಲ್ಪೆ, ಸಮಿತಿಯ ಸಂಚಾಲಕ ತಾರಾನಾಥ ಪೂಜಾರಿ, ನಂದ ಕಿಶೋರ್ ಮೊದಲಾದವರು‌ ಉಪಸ್ಥಿತರಿದ್ದರು. ಸತೀಶ್ ಚಿತ್ರಾಪುರ ಕಾರ್ಯಕ್ರಮ ನಿರೂಪಿಸಿದರು.ಲಗೋರಿ, ಕೈರಂಪಣಿ ಬಲೆ ಬೀಸುವ ಸ್ಪರ್ಧೆ, ಮರಳಿನಲ್ಲಿ ಶಿವನ ಕಲಾಕೃತಿ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.