ಪೌರಕಾರ್ಮಿಕರ ಆರೋಗ್ಯವೃದ್ಧಿಗೆ ಕ್ರೀಡೆ ಸಹಕಾರಿ: ಸತ್ಯನಾರಾಯಣ

| Published : Sep 21 2025, 02:00 AM IST

ಪೌರಕಾರ್ಮಿಕರ ಆರೋಗ್ಯವೃದ್ಧಿಗೆ ಕ್ರೀಡೆ ಸಹಕಾರಿ: ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರಿಗಾಗಿ ಕ್ರಿಕೆಟ್, ಚಕ್ರ ಎಸೆತ, ಗುಂಡು ಎಸೆತ, ಬಕೆಟ್ ನಲ್ಲಿ ಚೆಂಡು ಮುಂತಾದ ಆಟಗಳನ್ನು ಆಡಿಸಿದರು.

ವಿಜಯಪುರ: ಪ್ರತಿನಿತ್ಯ ಮುಂಜಾನೆ ಎದ್ದು, ಬೀದಿಗಳನ್ನು ಸ್ವಚ್ಛಗೊಳಿಸಿ, ಜನರೆಲ್ಲರಿಗೂ ಆರೋಗ್ಯ ಕೊಡುವಂತಹ ಪೌರಕಾರ್ಮಿಕರ ಆರೋಗ್ಯ ರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಹೇಳಿದರು.

ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ, ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರಕಾರ್ಮಿಕರು ದಿನನಿತ್ಯ ತಮ್ಮ ಆರೋಗ್ಯವನ್ನೂ ಗಮನಿಸದೇ ದುಡಿಯುತ್ತಾರೆ. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆಯನ್ನು ಕಾಪಾಡಿಕೊಳ್ಳಲು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಇಂತಹ ಅವಕಾಶಗಳನ್ನು ಪೌರಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷೆ ಎಸ್. ಭವ್ಯಾಮಹೇಶ್ ಮಾತನಾಡಿ, ಪೌರಕಾರ್ಮಿಕರಲ್ಲೂ ಉತ್ತಮ ಕ್ರೀಡಾಪಟುಗಳಿದ್ದಾರೆ. ಅವರಲ್ಲೂ ಬಹಳಷ್ಟು ಮಂದಿ ಉತ್ತಮ ಕೌಶಲ್ಯಗಳನ್ನು ಹೊಂದಿರುವವರು ಇದ್ದಾರೆ. ಅವರಲ್ಲಿನ ಕ್ರೀಡಾ ಸಾಮರ್ಥ್ಯ, ಕೌಶಲ್ಯಗಳನ್ನು ಹೊರಗೆ ತರಲು ಕ್ರೀಡಾಕೂಟಗಳು ಉತ್ತಮ ವೇದಿಕೆಗಳಾಗಲಿವೆ. ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಪೌರಕಾರ್ಮಿಕರಿಗಾಗಿ ಕ್ರಿಕೆಟ್, ಚಕ್ರ ಎಸೆತ, ಗುಂಡು ಎಸೆತ, ಬಕೆಟ್ ನಲ್ಲಿ ಚೆಂಡು ಮುಂತಾದ ಆಟಗಳನ್ನು ಆಡಿಸಿದರು.

ಪುರಸಭೆ ಉಪಾಧ್ಯಕ್ಷೆ ತಾಜುನ್ನಿಸಾ ಮಹಬೂಬ್ ಪಾಷ, ಸದಸ್ಯರಾದ ವಿ.ನಂದಕುಮಾರ್, ಸಿ.ನಾರಾಯಣಸ್ವಾಮಿ, ಬೈರೇಗೌಡ, ಮುಖಂಡ ಮಹಬೂಬ್ ಪಾಷ, ಪುರಸಭೆಯ ಪರಿಸರ ಎಂಜಿನಿಯರ್ ಶೇಖರ್ ರೆಡ್ಡಿ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ, ಪವನ್ ಜ್ಯೋಷಿ ಮುಂತಾದವರು ಹಾಜರಿದ್ದರು.