ಕನ್ನಡಪ್ರಭ ವಾರ್ತೆ ಮೈಸೂರು
ನವ್ಯ ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದ ಕೃಷ್ಣ ತಮಗೂ ಸಾಹಿತ್ಯ ರಚನೆಗೆ ಹುರಿದುಂಬಿಸಿದ್ದಾಗಿ ಹಿರಿಯ ಲೇಖಕ ದೇವನೂರ ಮಹಾದೇವ ಹೇಳಿದರು.ಅಮೂಲ್ಯ ಪುಸ್ತಕ ಪ್ರಕಾಶನದವರು ಪ್ರಕಟಿಸಿರುವ ಶ್ರೀಕೃಷ್ಣ ಆಲನಹಳ್ಳಿ ಅವರ ಸಮಗ್ರ ಕಥೆಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆಲನಹಳ್ಳಿ ಕೃಷ್ಣ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕುತ್ತಾ, ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆ ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ ಸಾಹಿತ್ಯಿಕ ಚಿಂತನೆಗಳಿಗೆ ವೇದಿಕೆಯಾಗಿದ್ದ ಆ ಪತ್ರಿಕೆ ಸಾಹಿತ್ಯ ವಲಯದಲ್ಲಿ ವಿಶಿಷ್ಟ ಗಮನ ಸೆಳೆದಿತ್ತು ಎಂದರು.ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು, ಮಾನವ ಸಂಬಂಧಗಳ ಸೂಕ್ಷ್ಮತೆ ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಪ್ರಮುಖರು ಶ್ರೀಕೃಷ್ಣ ಆಲನಹಳ್ಳಿ. ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಸಾಹಿತಿ ಎಂದು ದಾಖಲೆ ನಿರ್ಮಿಸಿರುವ ಅವರು ಕೇವಲ ನಾಲ್ಕು ದಶಕಗಳ ಬದುಕಿನಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾಗಿ ಹೇಳಿದರು.
ಕಥೆಗಾರರಾಗಿಯೂ, ಕವಿಯಾಗಿಯೂ ಗುರುತಿಸಿಕೊಂಡ ಆಲನಹಳ್ಳಿ ಅವರು ಮಣ್ಣಿನ ಹಾಡು, ಕಾಡು ಗಿಡದ ಹಾಡು ಪಾಡು, ಡೋಗ್ರಾ ಪಹಾರಿ ಪ್ರೇಮಗೀತೆಗಳು ಸೇರಿದಂತೆ ಹಲವಾರು ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರ ‘ಮಣ್ಣಿನ ಹಾಡು’ ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದ್ದು, ಅವರ ನಿಧನಾನಂತರ 1989ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಲಭಿಸಿದೆ. ಅವರ ಕೃತಿಗಳು ಇಂಗ್ಲಿಷ್, ಜರ್ಮನ್, ರಷ್ಯನ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ.
ಇದೀಗ ಅವರ ಎಲ್ಲಾ ಕಥೆಗಳನ್ನು ಒಟ್ಟುಗೂಡಿಸಿದ “ಸಮಗ್ರ ಕಥೆಗಳು” ಎಂಬ ಪುಸ್ತಕ ಪ್ರಕಟವಾಗಿದೆ. ಈ ಕೃತಿಯಲ್ಲಿ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಗುಚ್ಛಗಳು ಸೇರಿ ಒಟ್ಟು 232 ಪುಟಗಳ ಸಂಕಲನ ರೂಪುಗೊಂಡಿದೆ.
ಈ ವೇಳೆ ಆಲನಹಳ್ಳಿ ಕೃಷ್ಣ ಅವರ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಪ್ರಕಾಶಕ ಕೃಷ್ಣ ಚೆಂಗಡಿ, ಕತೆಗಾರ ಶಿವಾಗ್ ಇತರರು ಇದ್ದರು.