- ಮಳೆ ಬಿಡುವು ಹಿನ್ನೆಲೆ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳೊಂದಿಗೆ ಚುರಕು ಕಾಮಗಾರಿ
- - -ಕನ್ನಡಪ್ರಭ ವಾರ್ತೆ ಶೃಂಗೇರಿ
ಪಟ್ಟಣದ ತಾಲೂಕು ಕಚೇರಿ ಸಮೀಪ ಕುಸಿಯುತ್ತಿದ್ದ, ಅಪಾಯದ ಅಂಚಿನಲ್ಲಿದ್ದ ತಡೆಗೋಡೆಯಿಂದ ಮಣ್ಣು ತೆರವು ಕಾರ್ಯಾಚಾರಣೆ ಶುಕ್ರವಾರ ಬೆಳಗ್ಗೆಯಿಂದ ಆರಂಭಗೊಂಡಿತು. ಇದಕ್ಕೂ ಮೊದಲು ಶಾಸಕ ಟಿ.ಡಿ.ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಅಪಾಯ, ಅನಾಹುತ ಘಟಿಸದಂತೆ ಕೂಡಲೇ ತ್ವರಿತವಾಗಿ ಕಾಮಗಾರಿ ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಕಚೇರಿಯಿಂದ ಮುಸ್ಲಿಮರ ದರ್ಗಾದವರೆಗೂ ಗುಡ್ಡದ ತಳಭಾಗದಿಂದ ಸುಮಾರು 50 ರಿಂದ 60 ಅಡಿ ಎತ್ತರಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿತ್ತು. ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ತಡೆಗೋಡೆಯಲ್ಲಿ ಸಂಪೂರ್ಣ ಬಿರುಕು ಕಾಣಿಸಿಕೊಂಡಿತ್ತು. ತಡೆಗೋಡೆಯೊಳಗೆ ಲೋಡುಗಟ್ಟಲೆ ಮಣ್ಣು ತುಂಬಿಸಿದ್ದರಿಂದ ಒಂದೆಡೆ ಬಿರುಕು, ಇನ್ನೊಂದೆಡೆ ತಡೆಗೋಡೆಯು ಪಟ್ಟಣದತ್ತ ವಾಲತೊಡಗಿತ್ತು. ಗುರುವಾರ ಬೆಳಗ್ಗೆಯಿಂದ ಗುಡ್ಡದ ತಳಭಾಗದಲ್ಲಿದ್ದ ನಿವಾಸಿಗಳು, ಸ್ಥಳೀಯರು ಸೇರಿದಂತೆ ಸಾರ್ವಜನಿಕರು ತಾಲೂಕು ಕಚೇರಿ ಬಳಿ ಜಮಾಯಿಸಿ ತೀವ್ರ ಆಕ್ರೋಶ, ಪ್ರತಿಭಟನೆ ನಡೆದಿತ್ತು.
ಶುಕ್ರವಾರ ಬೆಳಗ್ಗೆ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳು ಸ್ಥಳಕ್ಕೆ ಬರಲಾರಂಬಿಸಿದವು. ಸುಮಾರು 2 ಜೆಸಿಬಿಗಳು, ಹಿಟಾಚಿ ಬಳಸಿ ತಡೆಗೋಡೆಯೊಳಗೆ ತುಂಬಿಸಿದ್ದ ಮಣ್ಣನ್ನು ಟಿಪ್ಪರ್‌ಗಳಲ್ಲಿ ತುಂಬಿಸಿ ಸಾಗಿಸಲಾಗುತ್ತಿತ್ತು. ಮಳೆ ಬಿಡುವು ನೀಡಿದ್ದರಿಂದ ತೆರವು ಕಾರ್ಯಾಚರಣೆ ಚುರುಕಿನಿಂದ ನಡೆಸಲಾಯಿತು.
ಗುಡ್ಡದ ಕೆಳಭಾಗದಲ್ಲಿರುವ ಭಾರತೀ ಬೀದಿ ರಸ್ತೆ ಪಕ್ಕದಲ್ಲಿರುವ ಮನೆಗಳಲ್ಲಿದ್ದ ಜನರನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ಅದರಂತೆ ಮನೆಗಳಲ್ಲಿನ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ಇನ್ನು ಕೆಲವರು ಸ್ಥಳಾಂತರಗೊಳ್ಳುತ್ತಿದ್ದರು. ಗುರುವಾರ ಸಂಜೆಯಿಂದ ಮಳೆ ಗಾಳಿಯ ಅಬ್ಬರ ಕಡಿಮೆಯಾಗಿದ್ದು, ಬಿಸಿಲು ಮಳೆ ವಾತಾವರಣವಿತ್ತು. ಕೆಲ ಅಂಗಡಿಗಳು ಇದ್ದು ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಗುರುವಾರ ರಾತ್ರಿ ಸ್ಥಳದಲ್ಲಿ ಅಗ್ನಿಶಾಮಕ ದಳ, ಪೋಲೀಸ್ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದರು.
- - --10ಶ್ರೀಚಿತ್ರ1:
ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಸಮೀಪ ಕುಸಿಯುವ ಹಂತದಲ್ಲಿರುವ ತಡೆಗೊಡೆಯೊಳಗಿಂದ ಜೆಸಿಬಿಗಳ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾಮಗಾರಿ ನಡೆಯಿತು.