ಶ್ರೀನಿವಾಸ್ ಹತ್ಯೆ ಪ್ರಕರಣ ಸಿಬಿಐಗೊಪ್ಪಿಸಿ: ಎಂ.ವೆಂಕಟಸ್ವಾಮಿ

| Published : Jan 26 2024, 01:46 AM IST

ಶ್ರೀನಿವಾಸ್ ಹತ್ಯೆ ಪ್ರಕರಣ ಸಿಬಿಐಗೊಪ್ಪಿಸಿ: ಎಂ.ವೆಂಕಟಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಓಡಿ ತನಿಖೆಯು ಅತ್ಯಂತ ವಿಳಂಬ ಧೋರಣೆ ಪಾಲನೆ ಮಾಡುತ್ತಿದೆ, ಈವರೆಗೆ ಯಾವುದೇ ರೀತಿ ತನಿಖೆಯಲ್ಲಿ ಪ್ರಗತಿ ಕಂಡುಬಾರದೆ ಇರುವುದು ಸಂಘಟನೆಕಾರರಲ್ಲಿ ಹಾಗೂ ಮೃತರ ಕುಟುಂಬದವರಲ್ಲಿ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ,

ಕನ್ನಡಪ್ರಭ ವಾರ್ತೆ ಕೋಲಾರ

ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ರ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಜ.೩೧ ರಂದು ಬೆಳಗ್ಗೆ ೧೧.೩೦ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆರ್.ಪಿ.ಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಧರಣಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು ಎಂದು ಆರ್.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೭ರಂದು ಶ್ರೀನಿವಾಸಪುರದಲ್ಲಿ ದಿ.ಎಂ.ಶ್ರೀನಿವಾಸನ್‌ರ ಶ್ರದ್ದಾಂಜಲಿ ಸಭೆಯಲ್ಲಿ ತೆಗೆದುಕೊಂಡ ಒಕ್ಕೂರಲಿನ ನಿರ್ಣಯ ಮೇರೆಗೆ ನ್ಯಾಯ ಪಡೆಯಲು ನಮಗೆ ಪ್ರತಿಭಟನೆ ಹೊರತಾಗಿ ಅನ್ಯಮಾರ್ಗವಿಲ್ಲ, ಈ ಹಿಂದೆ ೨೦೨೩ ಡಿ.೧ರಂದು ವಿವಿಧ ಸಂಘಟನೆಗಳು ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಸಂಘಟಿತರಾಗಿ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಪ್ರಕರಣವನ್ನು ಸಿಓಡಿ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು ಎಂದರು.

ಸಿಓಡಿ ತನಿಖೆಯು ಅತ್ಯಂತ ವಿಳಂಬ ಧೋರಣೆ ಪಾಲನೆ ಮಾಡುತ್ತಿದೆ, ಈವರೆಗೆ ಯಾವುದೇ ರೀತಿ ತನಿಖೆಯಲ್ಲಿ ಪ್ರಗತಿ ಕಂಡುಬಾರದೆ ಇರುವುದು ಸಂಘಟನೆಕಾರರಲ್ಲಿ ಹಾಗೂ ಮೃತರ ಕುಟುಂಬದವರಲ್ಲಿ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ, ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹಿಂದೆ ಸಂಚುಕೋರರು ಇದ್ದು, ಅವರನ್ನು ಬೆಳಕಿಗೆ ತರಬೇಕಾಗಿದೆ, ಆದರೆ ಆಡಳಿತ ಸರ್ಕಾರದ ಪಕ್ಷದ ಪ್ರಭಾವಿಗಳು ಇದರ ಬೆನ್ನಹಿಂದಿರುವುದರಿಂದ ತನಿಖೆಯಲ್ಲಿ ವಿಳಂಭ ಧೋರಣೆ ಹೊಂದಿ ನಿಜವಾದ ಆರೋಪಿಗಳನ್ನು ಮರೆಮಾಚುವ ಸಾಧ್ಯತೆಯಿದೆ. ಆದ್ದರಿಂದ ಸಿಓಡಿಗೆ ನೀಡಿರುವ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದಾಗ ಮಾತ್ರ ಸತ್ಯಾಂಶ ಬೆಳಕಿಗೆ ಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಮೃತರ ಪತ್ನಿ ಡಾ.ಚಂದ್ರಕಲಾ ಸೆರಗೊಡ್ಡಿ, ಶ್ರದ್ದಾಂಜಲಿ ಸಭೆಯಲ್ಲಿ ಈಗ ಬಂಧಿಸಿರುವ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬರಲಿದೆ. ಶ್ರೀನಿವಾಸ್ ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಆಪ್ತರಾಗಿದ್ದವರು, ಅಲ್ಲದೆ ದಲಿತ ಸಂಘಟನೆಗಳ ನಾಯಕರಾಗಿದ್ದ ಶ್ರೀನಿವಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ನಡೆಸದೇ ನಿರ್ಲಕ್ಷಿಸಿರುವುದು ವಿಷಾಧನೀಯ ಸಂಗತಿ ಎಂದರು.

ಸಿಓಡಿ ಕಚೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಇಲ್ಲ, ವಾಹನ ಸೌಲಭ್ಯಗಳಿಲ್ಲ ಎಂದು ಸರ್ಕಾರಿ ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆಂದರೆ ಸರ್ಕಾರದ ಆಡಳಿತ ಬಗ್ಗೆ ಸಾರ್ವಜನಿಕರೇ ಅರಿಯಬೇಕಾಗಿದೆ, ಪ್ರಕರಣದ ನಿರ್ಲಕ್ಷವಹಿಸಿರುವ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸಂಚುಕೋರರನ್ನು ಬಯಲಿಗೆಳೆದು ಬಂಧಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಮುಖಂಡ ಅಬ್ಬಣಿ ಶಿವಪ್ಪ, ಪ್ರಜಾ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಲ್ವಮಂಜಲಿ ಶಿವಣ್ಣ, ಆರ್.ಪಿ.ಐ. ಸಂಘಟನೆಯ ಪದಾಧಿಕಾರಿಗಳಾದ ಶ್ರೀನಿವಾಸಮೂರ್ತಿ, ವಕೀಲ ಬದರೀನಾರಾಯಣ್, ದಾಸಪ್ಪ, ಈಶ್ವರ್, ಜಿ.ಸಿ.ವೆಂಕಟರಮಣ, ಅಂಬರೀಷ್, ಸಂಪತ್, ಬ್ಯಾಟಪ್ಪ, ಸಂಜೀವಪ್ಪ, ಭಾಸ್ಕರ್ ಇದ್ದರು.