ಸಾರಾಂಶ
೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. ೨೧ರಿಂದ ಆರಂಭವಾಗಲಿದ್ದು, ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಪರೀಕ್ಷಾ ಮಂಡಳಿಯ ಮಾರ್ಗಸೂಚಿಗಳಂತೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ತಿಳಿಸಿದರು.
ಸಂಡೂರು: ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. ೨೧ರಿಂದ ಆರಂಭವಾಗಲಿದ್ದು, ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಪರೀಕ್ಷಾ ಮಂಡಳಿಯ ಮಾರ್ಗಸೂಚಿಗಳಂತೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕಾರ್ಯದ ಸಿದ್ಧತೆ ಕುರಿತು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿಯ ಮೂರು ಕೇಂದ್ರಗಳು ಸೇರಿ ತಾಲೂಕಿನಲ್ಲಿ ಒಟ್ಟು ೧೦ ಪರೀಕ್ಷಾ ಕೇಂದ್ರಗಳಿದ್ದು, ೩೯೮೪ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದಾರೆ. ಗುಣಾತ್ಮಕ ಫಲಿತಾಂಶಕ್ಕಾಗಿ ಸರಣಿ ಪರೀಕ್ಷೆಗಳು, ಜಿಲ್ಲಾ ಮತ್ತು ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆ, ತೆರೆದ ಪುಸ್ತಕ ಪರೀಕ್ಷೆ ಹಾಗೂ ಅಣಕು ಪರೀಕ್ಷೆ ನಡೆಸಿ, ಸನಿವಾಸ ತರಬೇತಿಯನ್ನು ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಬಸ್ ಡಿಪೋದವರಿಗೆ, ಕೇಂದ್ರಗಳಲ್ಲಿ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ತೆರೆಯಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುಣಾತ್ಮಕ ಫಲಿತಾಂಶಕ್ಕಾಗಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮ, ಸಿಸಿ ಕ್ಯಾಮೆರಾ ಸಮರ್ಪಕ ಬಳಕೆ, ಸುರಕ್ಷತೆಗಾಗಿ ರಾತ್ರಿ ಕಾವಲುಗಾರರ ನೇಮಕ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಳ್ಳಲಾದ ಪರೀಕ್ಷಾ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಪರೀಕ್ಷಾ ಮಂಡಳಿಯ ೩೨ ಪುಟಗಳ ಮಾರ್ಗಸೂಚಿಯಂತೆ ವ್ಯವಸ್ಥಿತವಾಗಿ ಯಾವುದೇ ಲೋಪವಾಗದಂತೆ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕಾರ್ಯದ ಅಧಿಕಾರಿಗಳು, ಸಿಬ್ಬಂದಿಗೆ ನಿರ್ದೇಶನ ನೀಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಕೊಟ್ರೇಶಪ್ಪ ಮಾತನಾಡಿದರು. ಶಿಕ್ಷಕ ಹುಣಸಿಕಟ್ಟಿ ನಾಗರಾಜ ಕಾರ್ಯಕ್ರಮ ನಿರೂಪಿಸಿದರು.