ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ಮಲೆತಿರಿಕೆ ಮಹಾದೇವನ ವಾರ್ಷಿಕ ಮಹೋತ್ಸವ ದ ಅಂಗವಾಗಿ ಪೇಟೆ ಮೆರವಣಿಗೆ ನಡೆಯಿತು.ವಿರಾಜಪೇಟೆ ನಗರಕ್ಕೆ ಹೊಂದಿಕೊಂಡಿರುವ ಮಗ್ಗುಲ, ವೈಪಾಡ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಗ್ರಾಮಗಳ ಆಧಿ ಮಹಾದೇವ ಮಲೆ ತಿರಿಕೆ ಬೆಟ್ಟದ ತುದಿಯಲ್ಲಿ ಮಂದವಿಸ್ಮಿತವಾಗಿ ಸ್ಥಿತಗೊಂಡಿರುವ ಶಿವಸ್ವರೂಪಿ ಶ್ರೀ ಮಲೆ ಮಹಾದೇಶ್ವರ ದೇಗುಲದ ವಾರ್ಷಿಕ ಮಹೋತ್ಸವವು ಮಾ. 15 ರಂದು ಆರಂಭವಾಯಿತು. ಉತ್ಸವ ನಾಲ್ಕನೇ ದಿನವಾದ ಇಂದು ಬುಧವಾರ ಬೆಳಗ್ಗಿನ ಪೂಜಾ ಕೈಂಕರ್ಯಗಳು ಜರುಗಿ ಮಧ್ಯಾಹ್ನ 12 ಗಂಟೆಗೆ ನೆರೆಪು, ಎತ್ತ್ ಪೋರಾಟ್, ತೆಂಗಿನಕಾಯಿ ಗೆ ಗುಂಡು ಹೊಡೆಯುವುದು, ಮಹಾ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು ಸಂಜೆ ವೇಳೆಗೆ ಉತ್ಸವ ಮೂರ್ತಿಯ ಪೇಟೆ ಮೆರವಣಿಗೆ ನಡೆಯಿತು. ಸುಂಕದಕಟ್ಟೆಯಲ್ಲಿ ಪ್ರಥಮ ಪೂಜೆ ಸ್ವೀಕರಿಸಿ ನಂತರ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗೆ ಸಾಮೂಹಿಕ ವಿಶೇಷ ಪೂಜೆ ಸಮರ್ಪಿಸಲಾಯಿತು. ಗಣಪತಿ ದೇಗುಲದ ಪೂಜೆ, ಕೃಷ್ಣ ಸ್ಟೋರ್ ಬಳಿಯ ರಾಮ್ ಲಾಲ್ ಕಟ್ಟೆ ಪೂಜೆ ಗಳು ಸಲ್ಲಿಕೆಯಾದವು ದೇವಾಂಗ ಬೀದಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆಯಾಗಿ ಮುಖ್ಯ ರಸ್ತೆಯ ತೆಲುಗರ ಬೀದಿ ಮೂಲಕ ಮಲೆತಿರಿಕೆ ಬೆಟ್ಟದ ದೇಗುಲಕ್ಕೆ ಹಿಂದಿರುಗಿತು. ಮೆರವಣಿಗೆಯ ಸಂದರ್ಭದಲ್ಲಿ ಚೆಂಡೆ ಮದ್ದಳೆ, ಕೊಡಗಿನ ಸಾಂಪ್ರದಾಯಿಕ ವಾಲಗವು ಮೆರವಣಿಗೆಗೆ ಸಾಥ್ ನೀಡಿದವು. ಜೈನರ ಬೀದಿಯ ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ಸದಸ್ಯರು, ಸಾಮೂಹಿಕ ಪೂಜೆಗಳು ಸಲ್ಲುವ ಸ್ಥಳದಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ವೈಪಡ ಗ್ರಾಮದ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಅರ್ಚಕರು, ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಶ್ರೀ ದೇವರ ಆಶೀರ್ವಾದ ಪಡೆದು ಪುನೀತರಾದರು.