ಪೂರ್ವಸೂಚನೆಯಿಲ್ಲದೆ ಪದೇಪದೇ ಕರೆಂಟ್‌ ಕಟ್‌

| Published : Mar 21 2025, 12:35 AM IST

ಸಾರಾಂಶ

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದುರಸ್ತಿ ಕಾಮಗಾರಿ ಹೆಸರಿನಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಆಗುತ್ತಿದೆ. ಬಿರುಬೇಸಿಗೆ ಧಗೆ ಹೆಚ್ಚುತ್ತಿರುವಂತೆಯೇ ಆಗಾಗ್ಗೆ ಕೈಕೊಡುವ ವಿದ್ಯುತ್‌ ಜನರನ್ನು ಹೈರಾಣಾಗಿಸಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದುರಸ್ತಿ ಕಾಮಗಾರಿ ಹೆಸರಿನಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಆಗುತ್ತಿದೆ. ಬಿರುಬೇಸಿಗೆ ಧಗೆ ಹೆಚ್ಚುತ್ತಿರುವಂತೆಯೇ ಆಗಾಗ್ಗೆ ಕೈಕೊಡುವ ವಿದ್ಯುತ್‌ ಜನರನ್ನು ಹೈರಾಣಾಗಿಸಿದೆ.

ಜಿಲ್ಲೆಯಲ್ಲಿ ಹಲವು ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಹೆಚ್ಚಾಗಿದ್ದು, ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಪದೇ ಪದೇ ವಿದ್ಯುತ್‌ ಕಡಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ. ಮಾರ್ಚ್-ಏಪ್ರಿಲ್‌ ತಿಂಗಳು ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ ಎಂದೇ ಪರಿಗಣಿತವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಅದಕ್ಕಾಗಿ ವಿದ್ಯಾರ್ಥಿಗಳು ತಯಾರಿ ಶುರು ಮಾಡುತ್ತಾರೆ. ಆದರೆ, ಹಗಲು-ರಾತ್ರಿ ಎನ್ನದೆ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕೆಂಬ ವಿದ್ಯಾರ್ಥಿಗಳ ಪ್ರಯತ್ನಕ್ಕೆ ವಿದ್ಯುತ್‌ ಕಡಿತ ಕಾಡಲಾರಂಭಿಸಿದೆ.

ಮೆಸ್ಕಾಂ ಅಧಿಕಾರಿಗಳು ಕುಂಟು ನೆಪವೊಡ್ಡಿ ಗ್ರಾಮೀಣ ಭಾಗದಲ್ಲಿ ಪದೇ ಪದೇ ವಿದ್ಯುತ್‌ ಕಡಿತ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಮಕ್ಕಳು ಎಣ್ಣೆ ದೀಪ, ಬ್ಯಾಟರಿ ವ್ಯವಸ್ಥೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುವಂತಾಗಿದೆ. ಶಿವಮೊಗ್ಗ ತಾಲೂಕು, ಸೊರಬ, ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ಆಗಾಗ್ಗೆ ಕರೆಂಟ್‌ ಕಟ್‌ ಆಗುತ್ತಲೇ ಇರುತ್ತದೆ. ಪ್ರತಿ ಬಾರಿ ಕರೆಂಟ್‌ ಕಟ್‌ ಆದಾಗಲೂ ಅಲ್ಲಿ ಲೈನ್‌ ಟ್ರಬಲ್‌ ಆಗಿದೆ. ಇಲ್ಲಿ ಲೈನ್‌ ಟ್ರಿಪ್‌ ಆಗಿದೆ ಸರಿಮಾಡುತ್ತಿದ್ದೇವೆ ಎಂದು ಮೆಸ್ಕಾಂ ಸಿಬ್ಬಂದಿ ಹಾರಿಕೆ ಉತ್ತರಗಳನ್ನೇ ನೀಡುತ್ತಿದ್ದಾರೆ ವಿನಃ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಲೈನ್‌ ಮೇಲೆ ಮರಬೀಳುವುದು, ಜೋರು ಗಾಳಿ ಮಳೆಗೆ ಟಿಸಿ ಟ್ರಬಲ್‌ನಿಂದಾಗಿ ಬಹುತೇಕ ಗ್ರಾಮೀಣಾ ಭಾಗದ ಜನರು ಕತ್ತಲ್ಲಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ, ಬೇಸಿಗೆಯಲ್ಲೂ ನಿತ್ಯವೂ ಪೂರ್ವಸೂಚನೆಯಿಲ್ಲದೇ ವಿದ್ಯುತ್‌ ನಿಲುಗಡೆಯಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಹಲವು ಗ್ರಾಮಗಳಲ್ಲಿ ನಿತ್ಯವೂ ಸಂಜೆ ವೇಳೆ ಪದೇ ಪದೇ ವಿದ್ಯುತ್‌ ಪೂರೈಕೆ ಸ್ಥಗಿತ ಮಾಡಲಾಗುತ್ತಿದೆ. ಸಂಜೆ ವಿದ್ಯಾರ್ಥಿಗಳ ಅಧ್ಯಯನ ಸಮಯವಾಗಿರುವುದರಿಂದ ವಿದ್ಯುತ್‌ ಕಡಿತವಾದರೆ ಶೈಕ್ಷಣಿಕ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಇನ್ನು ಬೇಸಿಗೆಯಲ್ಲಿ ಹೊಲ ಗದ್ದೆಗಳಿಗೆ ನೀರು ಹಾಯಿಸಲು ಕರೆಂಟ್‌ ಸಮಸ್ಯೆ ಎದುರಿಸುತ್ತಿರುವ ರೈತರು ಮೆಸ್ಕಾಂ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಲೇ ಇರುತ್ತಾರೆ. ಅಲ್ಲದೆ, ಸಂಜೆ ಬಳಿಕ ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿರುವುದರಿಂದ ಮನೆಯಲ್ಲಿ ಆ ವೇಳೆ ಅಡುಗೆ ಕಾರ್ಯ ಸಹಿತ ಬೇರ್ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಕರೆಂಟ್‌ ಕಟ್ ಆದ ಬಳಿಕ ಕರೆಂಟ್‌ ಯಾವಾಗ ಬರುತ್ತದೆ ಎನ್ನುನ ಮಾಹಿತಿ ಕೇಳಲು ಸಾವಜನಿಕರು ಮೆಸ್ಕಾಂ ಕಚೇರಿಗೆ, ಸಿಬ್ಬಂದಿಗೆ ಕರೆ ಮಾಡಿದರೆ ಕರೆಗಳನ್ನು ಸ್ವೀಕರಿಸುವುದಿಲ್ಲ. ಕೆಲವೊಮ್ಮ ಕರೆ ಸ್ವೀಕರಿಸದರೂ ಲೈನ್‌ನಲ್ಲಿ ಸಮಸ್ಯೆಯಾಗಿದೆ. ಸರಿಮಾಡುತ್ತಿದ್ದೇವೆ. ಅಮೇಲೆ ಬರುತ್ತದೆ ಎಂದು ಹೇಳಿ ಕರೆ ಕಟ್‌ ಮಾಡುತ್ತಾರೆ ಎಂಬುದು ಸಾರ್ವಜನಿಕರ ಆರೋಪ.ಲೋಡ್ ಶೆಡ್ಡಿಂಗ್‍ನಿಂದ ರೈತರಿಗೆ ತುಂಬಾ ಅನನುಕೂಲ ಆಗುತ್ತಿದೆ. ನಮಗೆ ಪವರ್ ಲೈನ್ ಕೊಡುವುದೇ ರಾತ್ರಿ ಸಮಯದಲ್ಲಿ. ಈಗಿರುವಾಗ ಪದೇ ಪದೇ ಕರೆಂಟ್ ಹೋದರೆ ಬೆಳೆಗಳಿಗೆ ನೀರು ಕೊಡುವುದು ಕಷ್ಟವಾಗುತ್ತದೆ. ದಯಮಾಡಿ ಲೋಡ್ ಶೆಡ್ಡಿಂಗ್ ಬಿಟ್ಟು ನಿರಂತರವಾಗಿ ಕನಿಷ್ಠ 10 ಘಂಟೆಗಳ ಕಾಲ ಹಗಲು ಹೊತ್ತಿನಲ್ಲಿ ಪವರ್ ಲೈನ್ ಕೊಡಬೇಕು.

- ಪುರಲೆ ಚಂದ್ರಪ್ಪ, ರೈತ. ಅಗತ್ಯ ಕ್ರಮ ಕೈಗೊಳ್ಳಿ

ತೀರ್ಥಹಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದಾಗಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಕುಡಿಯುವ ನೀರು ಸೇರಿದಂತೆ ಕೃಷಿ ಪಂಪ್ ಸೆಟ್‍ಗಳಿಗೂ ಹಿನ್ನಡೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಪಟ್ಟಣ ವ್ಯಾಪ್ತಿಯಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಯದಿಂದಾಗಿ ವ್ಯಾಪಾರ ವ್ಯವಹಾರಗಳಿಗೆ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿರುವುದು ಕೃಷಿ ಪಂಪ್ ಸೆಟ್‍ಗಳಿಗೂ ಹಿನ್ನಡೆಯಾಗುತ್ತಿದೆ ಎಂಬುದು ಕೃಷಿಕರ ಅಹವಾಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪಿಯುಸಿ ಮತ್ತಿತರ ತರಗತಿಗಳ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ತೀರಾ ಅನಾನುಕೂಲವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡಾ ಆರಂಭವಾಗುತ್ತಿದ್ದು, ವಿದ್ಯುತ್ ಕಡಿತವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಪೋಷಕರು ಮನವಿ ಮಾಡಿದ್ದಾರೆ.