ಮುಂಡರಗಿ: ಸರ್ಕಾರಿ ವಸತಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಅನುತ್ತೀರ್ಣವಾಗದಂತೆ ನೋಡಿಕೊಳ್ಳುವುದು ವಸತಿನಿಲಯಗಳ ಮೇಲ್ವಿಚಾರಕರ ಕರ್ತವ್ಯ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಫಲಿತಾಂಶ 100ಕ್ಕೆ 100ರಷ್ಟು ಸಾಧಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಿಳಿಸಿದರು.
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಗುರುವಾರ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯದಲ್ಲಿ ತಾಲೂಕಿನ 10 ವಸತಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ 3 ದಿನಗಳ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು.ಪರೀಕ್ಷೆಗೆ 35 ದಿನ ಬಾಕಿ ಉಳಿದಿದ್ದು, ವಿದ್ಯಾರ್ಥಿಗಳು ನಿತ್ಯ 4 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬರೆಯುತ್ತಾ ಅಭ್ಯಾಸ ಮಾಡಬೇಕು. ಅಂದಾಗ ಸುಲಭವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಕಾರ್ಯಾಗಾರದಲ್ಲಿ ಮಿಷನ್ 40 ಪ್ಲಸ್ ವಿದ್ಯಾರ್ಥಿಗಳಿಗೆ ಬರವಣಿಗೆ ಮೂಲಕ ರೂಢಿ ಮಾಡುವಂತೆ ಸಂಪನ್ಮೂಲ ವ್ಯಕ್ತಿಗಳಿಗೆ ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವಾನಾಥ ಹೊಸಮನಿ ಮಾತನಾಡಿ, ಎಸ್ಎಸ್ಎಲ್‌ಸಿ ಫಲಿತಾಂಶ ವೃದ್ಧಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿನಿಲಯದ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ 3 ದಿನಗಳ ವಸತಿಯುತ ಕಾರ್ಯಾಗಾರ ಆರಂಭಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಕಾರ್ಯಾಗಾರವನ್ನು ಉಪತಹಸೀಲ್ದಾರ್ ಕೆ. ರಾಧಾ ಉದ್ಘಾಟಿಸಿದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಯೋಗಿ ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೌಢ ವಿಭಾಗದ ಸಂಪನ್ಮೂಲ ವ್ಯಕ್ತಿ ಹನುಮರೆಡ್ಡಿ ಇಟಗಿ ಹಾಗೂ ಪ್ರೌಢ ವಿಭಾಗದ ಶಿಕ್ಷಣ ಸಂಯೋಜಕ ಮನೋಹರ ಎಸ್. ಹಾಗೂ ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡಿದ್ದರು.