ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹಾಕಬಾರದು

| Published : Dec 21 2023, 01:15 AM IST

ಸಾರಾಂಶ

ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದ್ದು. ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹಾಕಬಾರದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಎನ್ನುವುದು ಕಷ್ಟವಾಗದೇ ಇಷ್ಟವಾಗುವಂತೆ ಮಾಡಬೇಕು. ಪಾಲಕರು ಮಕ್ಕಳಿಗೆ ಮನೋಸ್ಥೈರ್ಯ ನೀಡಬೇಕು ಎಂದು ಸಚಿವ ಅಜಯಕುಮಾರ ಸರನಾಯಕ ಹೇಳಿದರು.

ನವನಗರದ ಕಲಾಭವನದಲ್ಲಿ ವಿದ್ಯಾಗಿರಿಯ ಸೆಂಟ್ ಆನ್ಸ ಪ್ರೌಢಶಾಲೆ ಹಾಗೂ ಪದವಿಪೂರ್ವ ಮಹಾವಿದ್ಯಾಲಯದ ಪಾಲಕರ ಸಭೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ವಿಶೇಷ ಅತಿಥಿಯಾಗಿ ಇಸ್ರೋ ಸಂಸ್ಥೆಯ ಗಗನಯಾನ ವಿಭಾಗದ ಉಪಯೋಜನಾ ನಿರ್ದೇಶಕಿ ಎಂ.ಹೇಮಲತಾ ಮಾತನಾಡಿ, ಸತತ ಪ್ರಯತ್ನ ಮತ್ತು ಶ್ರದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು. ಸಮಯ ಮತ್ತು ಗುರಿ ವಿದ್ಯಾರ್ಥಿಗೆ ಪ್ರಮುಖವಾದದ್ದು. ಪಾಲಕರು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಮಕ್ಕಳಿಗೆ ಆಸ್ತಿಯನ್ನು ಮಾಡದೇ ಸಮಾಜಕ್ಕೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು. ಇವರನ್ನು ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಸಿಸ್ಟರ್ ಮೇರಿ ಜಾಕೋಬ ಸನ್ಮಾನಿಸಿದರು.

ಕಳೆದ ವರ್ಷದ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ತೃಷಾ (99%), ಮಹೇಂದ್ರಕರ (98%), ಅನುಷಾ ಪಡಿಯಪ್ಪನವರ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 600 ವಿದ್ಯಾರ್ಥಿಗಳ ಪಾಲಕರು ಸಭೆಯಲ್ಲಿ ಸೇರಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ನೃತ್ಯಗಳು ಪಾಲಕರಿಗೆ ಮನರಂಜನೆ ನೀಡಿದವು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಾಗಲಕೋಟ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಬಡದನಿ ಹಾಗೂ ಸೆಂಟ್ ಮೇರಿಸ್ ಚರ್ಚಿನ ಧರ್ಮಗುರು ಪೂಜ್ಯ ಪ್ರಕಾಶ ಮೋರಾಸ್, ಸೆಂಟ್ ಆನ್ಸ ಐ.ಸಿ.ಎಸ್.ಸಿ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಮ್ಯಾಗ್ಗಿ ಹಾಗೂ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಜಯಂತಿ ದಾಸ್ ಇದ್ದರು. ಶಿಕ್ಷಕಿ ಶಾರದಾ ಮಡಿವಾಳರ ಶಾಲೆಯ ವಾರ್ಷಿಕ ಶೈಕ್ಷಣಿಕ ಸಾಧನೆಗಳನ್ನು ವಾಚಿಸಿದರು. ಶಿರಾಲಿ ಕೋರಾ ಜೈಮಿಕಾ ಸೋನಿ ಸ್ವಾಗತಿಸಿ ಪರಿಚಯಿಸಿದರು. ಕಾವ್ಯಾ ದೇಶಪಾಂಡೆ, ಶ್ರೇಯಾ ಕುಲಕರ್ಣಿ ವಂದಿಸಿದರು. ಅರ್ಚನಾ ಯಲವಾರ್‌, ಅಮೂಲ್ಯ ಚವಾಣ ನಿರೂಪಿಸಿದರು.

---

ಕೋಟ್

ಸತತ ಪ್ರಯತ್ನ ಮತ್ತು ಶ್ರದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು. ಸಮಯ ಮತ್ತು ಗುರಿ ವಿದ್ಯಾರ್ಥಿಗೆ ಪ್ರಮುಖವಾದದ್ದು. ಪಾಲಕರು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಮಕ್ಕಳಿಗೆ ಆಸ್ತಿಯನ್ನು ಮಾಡದೇ ಸಮಾಜಕ್ಕೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು.

ಎಂ.ಹೇಮಲತಾ, ಇಸ್ರೋ ಗಗನಯಾನ ವಿಭಾಗದ ಉಪಯೋಜನಾ ನಿರ್ದೇಶಕಿ