ಜ್ಞಾನಕ್ಕಿಂತ ಕಲ್ಪನಾಶಕ್ತಿ ದೊಡ್ಡದು: ಎಚ್.ಡಿ.ತಮ್ಮಯ್ಯ

| Published : Dec 21 2023, 01:15 AM IST

ಸಾರಾಂಶ

ಜ್ಞಾನಕ್ಕಿಂತ ಕಲ್ಪನಾಶಕ್ತಿ ದೊಡ್ಡದು: ಎಚ್.ಡಿ.ತಮ್ಮಯ್ಯ ಖ್ಯಾತ ವಿಜ್ಞಾನಿ ಅಲ್ಬರ್ಟ್‌ಐನ್‌ಸ್ಟಿನ್ ಜ್ಞಾನಕ್ಕಿಂತ ಕಲ್ಪನಾಶಕ್ತಿ ದೊಡ್ಡದು ಎಂದಿರುವುದನ್ನು ಉಲ್ಲೇಖವಿದ್ಯಾರ್ಥಿ ಯುವಜನರು ಹಿರಿದಾದ ಕನಸನ್ನು ಕಾಣಬೇಕು. ದೊಡ್ಡ ಗುರಿ ಹೊಂದಬೇಕು

ಐಡಿಎಸ್‌ಜಿ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಘಟಕಗಳ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳು ದೊಡ್ಡ ದೊಡ್ಕ ಕನಸುನ್ನು ಕಾಣಬೇಕು. ಜ್ಞಾನಕ್ಕಿಂತ ಕಲ್ಪನಾ ಶಕ್ತಿ ದೊಡ್ಡದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ , ಎನ್‌ಸಿಸಿ ಹಾಗೂ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳ ವಾರ್ಷಿಕ ಚಟುವಟಿಕೆಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಖ್ಯಾತ ವಿಜ್ಞಾನಿ ಅಲ್ಬರ್ಟ್‌ಐನ್‌ಸ್ಟಿನ್ ಜ್ಞಾನಕ್ಕಿಂತ ಕಲ್ಪನಾಶಕ್ತಿ ದೊಡ್ಡದು ಎಂದಿರುವುದನ್ನು ಉಲ್ಲೇಖಿಸಿದ ಅವರು, ಜ್ಞಾನಕ್ಕೆ ಚೌಕಟ್ಟಿದೆ. ಆದರೆ ಕಲ್ಪನೆ ವಿಶ್ವ ವ್ಯಾಪಿಯಾಗಿರಲು ಸಾಧ್ಯ. ವಿದ್ಯಾರ್ಥಿ ಯುವಜನರು ಹಿರಿದಾದ ಕನಸನ್ನು ಕಾಣಬೇಕು. ದೊಡ್ಡ ಗುರಿ ಹೊಂದಬೇಕು. ಗುರಿಯೆ ಇಲ್ಲದಿದ್ದರೆ ವಿದ್ಯಾರ್ಥಿ ಜೀವನಕ್ಕೆ ಅರ್ಥವಿರುವುದಿಲ್ಲ ಎಂದರು.

ಕನಸು ಕಾಣುವುದರಲ್ಲಿ ಜಿಪುಣತನ ಬೇಡ. ಇದಕ್ಕೆ ಹಣವೂ ಖರ್ಚಾಗದು ಎಂದ ತಮ್ಮಯ್ಯ, ಉನ್ನತ ಕನಸಿನ ಜೊತೆಗೆ ನಿತ್ಯ ಗುರಿ ನೆನಪಿಸಿಕೊಳ್ಳಬೇಕು. ಗುರಿ ಸಾಧನೆಯತ್ತ ಹೆಜ್ಜೆ ಹಾಕಬೇಕು. ನಿರಂತರ ಪ್ರಯತ್ನ, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.

ವಿಧಾನಪರಿಷತ್ತು ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ದೇಹದ ಆರೋಗ್ಯ ಮತ್ತು ಮನಸ್ಸಿನ ಆರೋಗ್ಯದಲ್ಲಿ ಸಮತೋಲನ ಕಾಪಾಡಲು ಗುಣಮಟ್ಟದ ಶಿಕ್ಷಣ ಸಾಧ್ಯ. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರ ಹಕ್ಕು. ಸಂವಿಧಾನದ ಆಶಯವೂ ಹೌದು. ಆದರೆ ಇಂದು ಇವೆರಡನ್ನೂ ಕಟ್ಟಕಡೆಯ ಪ್ರಜೆಗೆ ನೀಡುವಲ್ಲಿ ಸರ್ಕಾರದ ಕರ್ತವ್ಯ ಪರಿಪಾಲನೆ ಯಾಗಿಲ್ಲ ಎಂದರು. ಮೌಲ್ಯಯುತವಾದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು. ಸಂಸ್ಕಾರ ಜೊತೆಗೆ ಜೀವನ ಶಿಕ್ಷಣ ಪಡೆಯದಿದ್ದರೆ ಪ್ರಯೋಜನವಿಲ್ಲ. ಸಂಬಂಧಗಳು ಇಂದು ಮರೆಯಾಗುತ್ತಿದೆ. ಗುರುಶಿಷ್ಯ, ತಂದೆತಾಯಿ, ಅಣ್ಣತಮ್ಮ, ಅಕ್ಕತಂಗಿ ಸಂಬಂಧ ಗಳನ್ನು ಕಾಪಾಡಿಕೊಂಡು ಹೋಗಬೇಕು. ದಾಸ ಶರಣರ ಪರಂಪರೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಪ್ರಧಾನ ಉಪನ್ಯಾಸ ನೀಡಿ, ಭವಿಷ್ಯ ರೂಪಿಸಿಕೊಳ್ಳಲು ಪದವಿ ಪ್ರಮಾಣಪತ್ರವೊಂದೇ ಸಾಧ್ಯವಾಗದು. ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸ್ವತಂತ್ರವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ. ಎನ್‌ಸಿಸಿ, ಎನ್‌ಎಸ್‌ಎಸ್‌ಗಳು ಶಿಸ್ತು, ಸೇವೆಯಂತಹ ಮಾನವೀಯ ಮೌಲ್ಯಗಳನ್ನು ಕಲಿಸುತ್ತವೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಕೆ.ಸಿ.ಚಾಂದಿನಿ ಮಾತನಾಡಿ, ಸುಪ್ತ ಪ್ರತಿಭೆ ಹೊರಹೊಮ್ಮಿಸಲು ಕಾಲೇಜು ಒದಗಿಸುವ ವೇದಿಕೆಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ಉನ್ನತಿ ಸಾಧಿಸ ಬೇಕೆಂದರು. ಖ್ಯಾತ ಗಾಯಕಿ ಭಾಗ್ಯಶ್ರೀ ಗೌಡ ಗೀತಗಾಯನದೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.ಸೋಮಶೇಖರ್ ಸ್ವಾಗತಿಸಿ, ರೋವರ್ಸ್‌ ಲೀಡರ್ ಈ.ಸತೀಶ್ ವಂದಿಸಿದರು. ಎಂ.ಎಸ್.ಸುಧೀರ್ ರೈತಗೀತೆ ಮತ್ತು ನಾಡಗೀತೆ ಪ್ರಸ್ತುತಗೊಳಿಸಿದ್ದು, ವಿನಯ್ ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ನೂತನ ಸದಸ್ಯರಾದ ಸಿ.ಪಿ.ನಾರಾಯಣ, ಭದ್ರೇಗೌಡ, ಮೋಹನ್, ಕಮಲ್, ಸುಮಂತ್, ಆದಿಲ್ ಮತ್ತು ಉಮೇಶ್‌ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡಾವಿಭಾಗದ ಸಂಚಾಲಕ ಪ್ರೊ.ಕೆ.ಎನ್. ಲಕ್ಷ್ಮಿಕಾಂತ, ಯುವರೆಡ್‌ ಕ್ರಾಸ್ ಸಂಚಾಲಕ ಡಾ.ಲೋಕೇಶ್, ಎನ್‌ಸಿಸಿ ಅಧಿಕಾರಿ ಕಿಶೋರ್‌ ಗುಜ್ಜಾರ್, ಎನ್‌ಎಸ್‌ಎಸ್ ಕಾರ್‍ಯಕ್ರಮಾಧಿಕಾರಿ ಡಾ.ಕೆ.ಎಂ.ಜಗದೀಶ್ ಮತ್ತು ಡಾ.ಎಸ್.ಮಹೇಶ್ ವೇದಿಕೆಯಲ್ಲಿದ್ದರು.

20 ಕೆಸಿಕೆಎಂ 1ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಚಟುವಟಿಕೆಗಳಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಬುಧವಾರ ಚಾಲನೆ ನೀಡಿದರು. ಭೋಜೇಗೌಡ, ಡಾ. ಚಾಂದಿನಿ, ಲಕ್ಷ್ಮೀಕಾಂತ್‌ ಇದ್ದರು.