ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಕೆಳಮಟ್ಟದ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಭಾರತವನ್ನು ಶ್ರೇಷ್ಠ ಕ್ರೀಡಾರಾಷ್ಟ್ರವಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ಹೇಳಿದರು.ತಾಲೂಕಿನ ವಿ.ಸಿ.ಫಾರಂನಲ್ಲಿ ₹14 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕ್ರೀಡಾಪಟುಗಳು ತರಬೇತಿ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದರು. ಕಳೆದ 11 ವರ್ಷಗಳಲ್ಲಿ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಕ್ರೀಡಾ ಸೌಲಭ್ಯ, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡುವ ಮೂಲಕ ಹೆಚ್ಚು ಹೆಚ್ಚು ಪದಕ ಗೆಲ್ಲುವುದಕ್ಕೆ ಕೇಂದ್ರ ಸಹಕಾರಿಯಾಗಿದೆ ಎಂದರು.
2016ರಲ್ಲಿ ಖೇಲೋ ಇಂಡಿಯಾ ಆರಂಭವಾದ ಬಳಿಕ ಇಡೀ ರಾಷ್ಟ್ರದಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕ್ರೀಡಾ ಚಟುವಟಿಕೆಗಳು ಪ್ರತಿ ಹಳ್ಳಿ ಮತ್ತು ಶಾಲೆಗಳಲ್ಲೂ ಆರಂಭಗೊಂಡಿವೆ. ಗ್ರಾಮೀಣ ಭಾಗದಿಂದಲೂ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ. ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್, ಒಲಂಪಿಕ್ಸ್ ಕ್ರೀಡಾಕೂಟದಲ್ಲೂ ಕ್ರೀಡಾಪಟುಗಳು ಚಿನ್ನ ಸೇರಿದಂತೆ ಹಲವು ಪದಕಗಳನ್ನು ಗೆಲ್ಲುವಂತಾಗಿದೆ ಎಂದರು.3 ಪಟ್ಟು ಹೆಚ್ಚು ಅನುದಾನ:ನರೇಂದ್ರ ಮೋದಿ ಅವರ ಸರ್ಕಾರ ಕಳೆದ ಬಜೆಟ್‌ನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ₹4000 ಕೋಟಿ ಹಂಚಿಕೆ ಮಾಡಿದೆ. 10 ವರ್ಷಗಳ ಹಿಂದೆ ಈ ಉದ್ದೇಶಕ್ಕೆ ಕೇವಲ ₹1200 ಕೋಟಿ ಮಾತ್ರ ಕೊಡಲಾಗುತ್ತಿತ್ತು. ಅದರ ಪ್ರಮಾಣ ಈಗ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದರು.
ಎಚ್‌ಡಿಕೆ ಪರಿಶ್ರಮ:
ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಹಾಗೂ ಎನ್‌ಡಿಎ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಪರಿಶ್ರಮದಿಂದ ಮಂಡ್ಯದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಕುಮಾರಸ್ವಾಮಿ ಅವರೇ, ಜನರಿಗಾಗಿ ನೀವು ಮಾಡಿರುವ ಕೆಲಸವು ಜನರು ನಿಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಯಲ್ಲಿಯೇ ಕಾಣುತ್ತಿದೆ. ವಿಶೇಷಚೇತನರ ಬಗ್ಗೆ ನೀವು ಹೊಂದಿರುವ ಮಮತೆ, ಬದ್ಧತೆಯನ್ನು ನಾನು ನೋಡುತ್ತಿದ್ದೇನೆ. ನನಗೆ ಬಹಳ ಸಂತೋಷ ಉಂಟು ಮಾಡಿದೆ. ನೀವು ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ಮೂಲಕ ಅಂಗವಿಕಲರಿಗೆ ಮಾತ್ರ ಸಹಾಯ ಮಾಡುತ್ತಿಲ್ಲ, ಪರಿಸರಕ್ಕೆ ಕೂಡ ಒಳ್ಳೆಯದು ಮಾಡುತ್ತಿದ್ದೀರಿ ಎಂದು ಮಾಂಡವೀಯ ಅವರು ಶ್ಲಾಘಿಸಿದರು.
ಮಂಡ್ಯಕ್ಕೆ ಶಾಶ್ವತ ಕೊಡುಗೆ-ಎಚ್‌ಡಿಕೆ:ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ವಾಹನಗಳ ಪರೀಕ್ಷಾ ಕೇಂದ್ರದ ಕೊರತೆ ಇತ್ತು. ಇಲ್ಲಿ ಉತ್ಪಾದನೆಯಾದ ವಾಹನಗಳನ್ನು ಪರೀಕ್ಷೆಗಾಗಿ ಪುಣೆ ಅಥವಾ ಚೆನ್ನೈಗೆ ತೆಗೆದುಕೊಂಡು ಹೋಗಬೇಕಿತ್ತು. ಆ ಕೊರತೆ ನೀಗಿಸಲು ಎಆರ್‌ಎಐನಿಂದ ಪರೀಕ್ಷಾ ಕೇಂದ್ರವನ್ನು ಆರಂಭಿಸಲು ಮಂಡ್ಯ ಜಿಲ್ಲೆಯಲ್ಲಿ ಜಾಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕೈಗಾರಿಕೆ ಸ್ಥಾಪನೆಗೆ 100 ಎಕರೆ ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ನಾನು ಕೈಗಾರಿಕೆಗಳನ್ನು ಸ್ಥಾಪಿಸುವ ವಿಷಯದಲ್ಲಿ ಮಂಡ್ಯದ ಜನರ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸುವುದಿಲ್ಲ. ಇದರ ಜತೆಗೆ ₹300 ಕೋಟಿ ವೆಚ್ಚದಲ್ಲಿ ಸ್ಟಾರ್ಟಪ್ ಕಂಪನಿಗಳನ್ನು ಆರಂಭಿಸುತ್ತೇನೆ ಎಂದರು.ಬಾಕ್ಸ್)))
ರಾಗಿ ಮುದ್ದೆ ತಿಂದೇಹೋಗುವೆ: ಮನ್ಸೂಖ್
ಮಂಡ್ಯಕ್ಕೆ ಬಂದಿದ್ದೇನೆ. ಇಲ್ಲಿನ ರಾಗಿಮುದ್ದೆ ಸ್ವಾದಿಷ್ಟ, ರುಚಿಕರವಾಗಿದೆ ಎಂದು ತಿಳಿದಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರಿಯವಾದ ರಾಗಿಮುದ್ದೆಯ ರುಚಿ ಸವಿದೇ ಹೋಗುವುದಾಗಿ ರಾಗಿ ಮುದ್ದೆ ತಿನ್ನುವ ಬಯಕೆಯನ್ನು ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ದೇವೇಗೌಡರಿಂದ ರಾಗಿಮುದ್ದೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿದೆ. ಅದರ ರುಚಿಯನ್ನು ನಾನು ಇದುವರೆಗೆ ಸವಿದಿಲ್ಲ. ಅದನ್ನು ಸವಿಯುವ ಅವಕಾಶ ಈಗ ದೊರಕಿದೆ. ಅದನ್ನು ಮಿಸ್ ಮಾಡಿಕೊಳ್ಳುವುದಿಲ್ಲ ಎಂದರು.