ಹಗರಿಬೊಮ್ಮನಹಳ್ಳಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದೇಶಗಳ ದುರಾಕ್ರಮಣ ವಿರೋಧಿಸಿ ಸಿಪಿಎಂ ತಾಲೂಕು ಘಟಕ ಶನಿವಾರ ಪ್ರತಿಭಟನೆ ನಡೆಸಿತು.ಪಟ್ಟಣದ ಪಕ್ಷದ ಕಚೇರಿಯಿಂದ ಪಾದಯಾತ್ರೆ ಮೂಲಕ ಬಸವೇಶ್ವರ ವೃತ್ತದ ಬಳಿ ಆಗಮಿಸಿದ ಮುಖಂಡರು ಮತ್ತು ಕಾರ್ಯಕರ್ತರು ಯುದ್ಧ ದಾಹಿ ಅಮೆರಿಕ, ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮುಖಂಡ ಆರ್.ಎಸ್. ಬಸವರಾಜ ಮಾತನಾಡಿ, ಯುದ್ಧದ ಪರಿಣಾಮ ಘೋರವಾಗಿದೆ. ದೇಶಾದ್ಯಂತ ಅಡುಗೆ ಅನಿಲ ಕೊರತೆ, ಜನತೆಯ ಪರದಾಟ, ಗ್ಯಾಸ್ ಬೆಲೆ ಏರಿಕೆಯಂತಹ ಅಪಸವ್ಯಗಳಿಗೆ ಕಾರಣವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.ಯುದ್ಧದಿಂದ ದೇಶಾದ್ಯಂತ ಅಸ್ಥಿರತೆ ಉಂಟಾಗಿದೆ. ಪೆಟ್ರೋಲಿಯಮ್ ಸರಬರಾಜಿನಲ್ಲಾಗಿರುವ ವ್ಯತ್ಯಯಗಳಿಂದ ದೇಶದ ಜನರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಬಡ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಜನತೆ ಹೆಚ್ಚುವರಿ ಭಾರದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ತಾಲೂಕು ಮುಖಂಡ ಎಸ್.ಜಗನ್ನಾಥ್ ದೂರಿದರು.
ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ನಿರಂತರ ಅಡುಗೆ ಅನಿಲ ಪೂರೈಸಬೇಕು ಎಂದು ಒತ್ತಾಯಿಸಿದರು.ಪಕ್ಷದ ಕಾರ್ಯದರ್ಶಿ ಮಾಳಮ್ಮ, ಮುಖಂಡರಾದ ಕೆ.ರಮೇಶ್, ಕೆ.ಅಂಜಿನಮ್ಮ, ಪಿ.ಚಾಂದಬೀ, ತಟ್ನಮ್ಮ, ರಾಮಣ್ಣ, ರಮೇಶ್, ಮೈಲಮ್ಮ ಇದ್ದರು.
ಇರಾನ್ ಮೇಲಿನ ಅಮೆರಿಕ, ಇಸ್ರೇಲ್ ದೇಶಗಳ ದುರಾಕ್ರಮಣ ವಿರೋಧಿಸಿ ಹಗರಿಬೊಮ್ಮನಹಳ್ಳಿ ಸಿಪಿಎಂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.