ಬಳ್ಳಾರಿ: ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ರಂಗಗೀತೆಗಳು, ಬಯಲಾಟ ಹಾಡುಗಳು ಹಾಗೂ ಬಯಲಾಟ ಸನ್ನಿವೇಶ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಮುಖಂಡ ಬಂಡೇಗೌಡ ಅವರು ಆಧುನಿಕತೆಯ ಭರಾಟೆಯಲ್ಲಿ ಬದಲಾಗುತ್ತಿರುವ ಜನರ ಮನಸ್ಥಿತಿ ಹಾಗೂ ಕಲಾ ಪ್ರಕಾರಗಳಿಗೆ ದೊರೆಯದ ಆದ್ಯತೆ ಕುರಿತು ಮಾತನಾಡಿದರು.ಅತಿಥಿಯಾಗಿ ಉಪಸ್ಥಿತರಿದ್ದ ರೈತ ಮುಖಂಡ ಎಂ. ಈಶ್ವರ ರೆಡ್ಡಿ ಮಲ್ಲಾಪುರ ಅವರು ಹಿರಿಯ ರಂಗಕರ್ಮಿ ಸುಜಾತಮ್ಮ ಅವರು ಬಯಲಾಟ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಾಗೂ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸಿದರು.
ಬಿಜೆಪಿ ಮುಖಂಡ ರಾಜೇಂದ್ರ ಪ್ರಸಾದ್, ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯ ಗುರುಸ್ವಾಮಿ ಕೆ. ಶ್ರೀನಿವಾಸ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಬಯಲಾಟ ಕಲಾವಿದೆ ಬಿ. ಸುಜಾತಮ್ಮ, ಅಕ್ಷರ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಕಾರ್ಯದರ್ಶಿ ಡಿ. ಚಕ್ರವರ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಎರ್ರೆಮ್ಮ ಹಾಗೂ ಕೆ. ಕುಸುಮಾ ಅವರು ರಂಗಗೀತೆಗಳು ಹಾಗೂ ಬಯಲಾಟ ಹಾಡುಗಳನ್ನು ಪ್ರಸ್ತುತಪಡಿಸಿದರು. ಡಿ. ಚಕ್ರವರ್ತಿ ಹಾಗೂ ಕೆ. ಶ್ರೀನಿವಾಸ ಅವರು ಭಕ್ತಿಗೀತೆಗಳನ್ನು ಮತ್ತು ಬಿ. ಸುಜಾತಮ್ಮ ಅವರ ನೇತೃತ್ವದಲ್ಲಿ ಬಯಲಾಟದ ಸ್ತ್ರೀವೇಷಧಾರಿ ಸನ್ನಿವೇಶಗಳನ್ನು ಪ್ರಸ್ತುತಪಡಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕೆ. ಕುಸುಮಾ ಹಾಗೂ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಲಕ್ಷ್ಮಿ ನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.