ರಾಷ್ಟ್ರೀಯ ಸ್ಟಾರ್ಟಪ್‌ ದಿನವಾದ ಜ.16 ರಂದು ಮಂಗಳೂರಿನಲ್ಲಿ ಸಿಲಿಕಾನ್‌ ಬೀಚ್‌ ಸ್ಟಾರ್ಟಪ್‌ ಸಮಾವೇಶ ‘ಟೈಕಾನ್‌ ಮಂಗಳೂರು 2026’ ಡಾ. ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌ನಲ್ಲಿ ಬೆಳಗ್ಗೆ 9ರಿಂದ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಸ್ಟಾರ್ಟಪ್‌ ದಿನವಾದ ಜ.16 ರಂದು ಮಂಗಳೂರಿನಲ್ಲಿ ಸಿಲಿಕಾನ್‌ ಬೀಚ್‌ ಸ್ಟಾರ್ಟಪ್‌ ಸಮಾವೇಶ ‘ಟೈಕಾನ್‌ ಮಂಗಳೂರು 2026’ ಡಾ. ಟಿಎಂಎ ಪೈ ಕನ್ವೆನ್ಷನ್‌ ಸೆಂಟರ್‌ನಲ್ಲಿ ಬೆಳಗ್ಗೆ 9ರಿಂದ ನಡೆಯಲಿದೆ. ಟೈ ಮಂಗಳೂರು ಘಟಕದ ಸ್ಥಾಪಕ ಅಧ್ಯಕ್ಷ ರೋಹಿತ್‌ ಭಟ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಉದ್ಯಮ ಉತ್ತೇಜನ ಸಂಸ್ಥೆ ‘ದಿ ಇಂಡಸ್‌ ಎಂಟರ್ಪ್ರನರ್ಸ್‌’ ಮಂಗಳೂರು ಘಟಕ, ಟೈಕಾನ್‌ ಮಂಗಳೂರು 2026ನ್ನು ಆಯೋಜಿಸುತ್ತಿದ್ದು ಕರ್ನಾಟಕ ಡಿಜಿಟಲ್‌ ಇಕಾನಮಿ ಮಿಷನ್‌ ಹಾಗೂ ಸಿಲಿಕಾನ್‌ ಬೀಚ್‌ ಪ್ರೋಗ್ರಾಂ ಸಹಯೋಗದಲ್ಲಿ ನಡೆಯಲಿದೆ. ದೇಶವಿದೇಶಗಳಿಂದ 500ಕ್ಕೂ ಅಧಿಕ ಉದ್ಯಮಿಗಳು, ಹೂಡಿಕೆದಾರರು, ಕಾರ್ಪೊರೇಟ್‌ ನಾಯಕರು, ಪಾಲಿಸಿ ತಜ್ಞರು ಹಾಗೂ ಸೃಜನಶೀಲ ನವೋದ್ಯಮಿಗಳು ಭಾಗವಹಿಸುತ್ತಿದ್ದು, ಸುಮಾರು 30ಕ್ಕೂ ಅಧಿಕ ಸ್ಟಾರ್ಟಪ್‌ಗಳು ಸಮಾವೇಶದ ಅಂಗವಾಗಿ ಪ್ರದರ್ಶಿನಿಯಲ್ಲಿ ತಮ್ಮ ಉದ್ಯಮಗಳನ್ನು ಪ್ರದರ್ಶಿಸಲಿದ್ದಾರೆ. ಕರಾವಳಿ ಕರ್ನಾಟಕವು ಸೃಜನಶೀಲ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಜಗತ್ತಿಗೆ ತೋರಿಸುವ, ಆ ಮೂಲಕ ಉತ್ತೇಜಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ ಎಂದರು.

ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ, ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಸ್‌. ಕೃಷ್ಣನ್‌, ರಾಜ್ಯ ಐಟಿಬಿಟಿ ಇಲಾಖೆ ಕಾರ್ಯದರ್ಶಿ ಕಾರ್ಯದರ್ಶಿ ಡಾ. ಮಂಜುಳಾ, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ, 3 ವನ್‌ 4 ಕ್ಯಾಪಿಟಲ್‌ ಅಧ್ಯಕ್ಷ ಟಿ.ವಿ.ಮೋಹನದಾಸ ಪೈ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಟೈಕಾನ್‌ ಮಂಗಳೂರು 2026 ಆಯೋಜನ ಸಮಿತಿ ಅಧ್ಯಕ್ಷ ಪ್ರಶಾಂತ್‌ ರಾವ್‌ ಆರೂರ್‌ ಮಾತನಾಡಿ, ಔದ್ಯಮಿಕ ಮತ್ತು ಆಡಳಿತ ಕ್ಷೇತ್ರದಲ್ಲಿನ ಪ್ರಭಾವಿ ಚಿಂತಕ, ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಅವರಿಂದ ಪ್ರೇರಿತರಾಗಿ ಈ ಪ್ರದೇಶವನ್ನು ದಶಕದ ಒಳಗೆ ಒಂದು ಪ್ರಮುಖ ಸೃಜನಶೀಲ ಉದ್ಯಮ ಕೇಂದ್ರವಾಗಿ ರೂಪಿಸಲು ಉದ್ದೇಶಿಸಲಾಗಿದೆ. 30ಕ್ಕೂ ಹೆಚ್ಚು ಉದಯೋನ್ಮುಖ ಸ್ಟಾರ್ಟಪ್‌ಗಳನ್ನು ಸ್ಟಾರ್ಟಪ್‌ ಪ್ರದರ್ಶಿನಿಯಲ್ಲಿ ಪ್ರಸ್ತುತಪಡಿಸಲಾಗುವುದು ಎಂದರು.ಟೈ ಉಪಾಧ್ಯಕ್ಷ ಶ್ಯಾಮ್‌ ಪ್ರಸಾದ್‌ ಹೆಬ್ಬಾರ್‌, ಪ್ರಮುಖರಾದ ಸುದೇಶ್‌ ಕರುಣಾಕರನ್‌, ಪ್ರಶಾಂತ್‌ ಶೆಣೈ ಇದ್ದರು.