ಪಾರಂಪರಿಕವಾಗಿ ಬೆಳೆದು ಬಂದ ದೇಸಿ ಸಂಸ್ಕೃತಿ, ಕಲೆ, ಜಾನಪದ, ಆಹಾರದಲ್ಲಿ ಸಂಸ್ಕಾರವಿದೆ, ಜ್ಞಾನವಿದೆ. ಮಾನಸಿಕ, ದೈಹಿಕ ಕ್ಷಮತೆ ಹೆಚ್ಚಿಸುವ ಸಾಧನವೂ ಇದಾಗಿದೆ. ಶತಮಾನದಿಂದಲೂ ಭರತನಾಟ್ಯ, ಸಂಗೀತ, ನಾಟಕ, ರೂಪಕಗಳು ಈ ವರೆಗೆ ಬಂದು ನಿಂತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.
ಧಾರವಾಡ:
ಯುವ ಜನಾಂಗ ದೇಸಿ ಸಂಸ್ಕೃತಿಯಿಂದ ದೂರವಾಗುತ್ತಿದ್ದು, ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಒಲವು ತೋರುತ್ತಿದೆ. ದೇಸಿ ಪರಂಪರೆಯತ್ತ ಮತ್ತೆ ಮರಳಲು ಹೊಸ ಪ್ರಯತ್ನಗಳು ನಡೆಯಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಗಣೇಶ ನೃತ್ಯ ಶಾಲೆಯ 36ನೇ ನೃತ್ಯ ನಿರಂತರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪಾರಂಪರಿಕವಾಗಿ ಬೆಳೆದು ಬಂದ ದೇಸಿ ಸಂಸ್ಕೃತಿ, ಕಲೆ, ಜಾನಪದ, ಆಹಾರದಲ್ಲಿ ಸಂಸ್ಕಾರವಿದೆ, ಜ್ಞಾನವಿದೆ. ಮಾನಸಿಕ, ದೈಹಿಕ ಕ್ಷಮತೆ ಹೆಚ್ಚಿಸುವ ಸಾಧನವೂ ಇದಾಗಿದೆ. ಶತಮಾನದಿಂದಲೂ ಭರತನಾಟ್ಯ, ಸಂಗೀತ, ನಾಟಕ, ರೂಪಕಗಳು ಈ ವರೆಗೆ ಬಂದು ನಿಂತಿವೆ. ಇವು ಮುಂದುವರಿಬೇಕು. ಅಂದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಸಲು-ಬೆಳೆಸಲು ಸಾಧ್ಯವೆಂದರು.
ತಹಸೀಲ್ದಾರ್ ಕಲಗೌಡ ಪಾಟೀಲ ಮಾತನಾಡಿ, ಕೆಲ ಯುವಜನರು ಹಿಂಸೆ, ದುಶ್ಚಟ, ವ್ಯಭಿಚಾರ, ದೈಹಿಕ ದುರಾಚಾರದಲ್ಲಿ ತೊಡಗಿಕೊಂಡು ತಮ್ಮ ಜೀವ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಲಹೆ ನೀಡಿದರು.ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರವಿಕುಮಾರ ಕಗ್ಗಣ್ಣವರ, ಸಂತೋಷ ಮಹಾಲೆ ಇದ್ದರು. ವಿದುಷಿ ರೋಹಿಣಿ ಇಮಾರತಿ, ವಾಣಿ ಉಡುಪಿ ಹಾಡುಗಾರಿಕೆ, ಡಾ. ಗೋಪಿಕೃಷ್ಣ ಮೃದಂಗ, ವಿದ್ವಾನ ಜಗನ್ನಾಥ ಕಬಾಡಿ ವಾಯಲಿನ್, ಸುಜಯ ಭಟ್ ಕೊಳಲು ನುಡಿಸಿದರು. ಸುಧಾ ಜೋಗಿ ಯೋಗ ನೃತ್ಯ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು.