ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಹೋಟೆಲ್‌ಲಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಜಲಾನಯನ ಅಭಿವೃದ್ಧಿ’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸಸಿಗೆ ನೀರೆರೆಯುವ ಮೂಲಕ ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನಮ್ಮ ಕಾರ್ಯಗಳು ಇತರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಬ್ಯಾಂಕ್, ಕೇಂದ್ರ ಭೂ ಸಂಪನ್ಮೂಲ ಇಲಾಖೆ, ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಉತ್ಕೃಷ್ಟತಾ ಕೇಂದ್ರದ ಸಹಯೋಗದೊಂದಿಗೆ ಹೆಬ್ಬಾಳದ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಜಲಾನಯನ ಸ್ಥಿತಿಸ್ಥಾಪಕತ್ವ, ವಿಜ್ಞಾನ, ಸ್ಥಿರತೆ ಮತ್ತು ಸಮಾಜದ ಏಕೀಕರಣ’ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಬ್ಯಾಂಕ್ ಅನುದಾನಿತ ರಿವಾರ್ಡ್‌ ಕಾರ್ಯಕ್ರಮದಡಿ ಭೂಮಿಯಲ್ಲಿರುವ ಸಂಪನ್ಮೂಲಗಳನ್ನು ಅನ್ವೇಷಿಸಲಾಗುತ್ತಿದೆ. ಇದರಿಂದಾಗಿ ಜಲಾನಯನ ನಿರ್ವಹಣೆಯಲ್ಲಿ ರಾಜ್ಯದ ಸ್ಥೈರ್ಯ ಹೆಚ್ಚಾಗಿದೆ. ಕಳೆದ ನಾಲ್ಕು ದಶಕಗಳಿಂದ ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಬೇರೆ ರಾಜ್ಯಗಳಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಂಕ್‌ನ ಕೃಷಿ ತಜ್ಞ ಆ್ಯಂಡ್ರೂ ಗುಡ್‌ಲ್ಯಾಂಡ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ‌.ಎಸ್‌.ವಿ.ಸುರೇಶ ಮತ್ತಿತರರು ಉಪಸ್ಥಿತರಿದ್ದರು. ಇಥಿಯೋಪಿಯಾ, ನೈಜೀರಿಯಾ, ಕೆನಡಾ, ನೈರೋಬಿ, ಫ್ರಾನ್ಸ್‌ ಮತ್ತಿತರ ದೇಶಗಳ ಪ್ರತಿನಿಧಿಗಳು, ದೇಶದ 24 ರಾಜ್ಯಗಳ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ನೋಡಲ್ ಎಜೆನ್ಸಿಗಳ ಮುಖ್ಯಸ್ಥರು, ತಜ್ಞರು ಪಾಲ್ಗೊಂಡಿದ್ದರು.